ಮತ್ತೆ ಕೊಳವೆ ಬಾವಿ ದುರಂತ: ಅಸು ನೀಗಿದ 14 ತಿಂಗಳ ಬಾಲಕ

ಶುಕ್ರವಾರ, 19 ಡಿಸೆಂಬರ್ 2014 (09:44 IST)
ಮಧ್ಯಪ್ರದೇಶದ ಛತ್ತರಪುರದ ಲಿಧೋರಾ ಗ್ರಾಮದಲ್ಲಿ 14 ತಿಂಗಳಿನ ಬಾಳಕ ಕೃಷ್ಣ ಲೋಧಿ ಎಂಬ ಬಾಲಕ ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಅಸು ನೀಗಿದ್ದಾನೆ.
ಬುಧವಾರ ಸಂಜೆ ತನ್ನ ಅತ್ತೆಯ ಜತೆ ಹೊಲಕ್ಕೆ ಹೋಗಿದ್ದ ಬಾಲಕ ಕೃಷ್ಣ, ಆಕೆ ಗಿಡಗಳಿಂದ ತರಕಾರಿಗಳನ್ನು ಆಯ್ದುಕೊಳ್ಳುತ್ತಿದ್ದಾಗ  ಅಲ್ಲೇ ಸಮೀಪ ಆಟವಾಡುತ್ತ ಕುಳಿತಿದ್ದ. ಸ್ವಲ್ಪ ಮುಂದೆ ನಡೆದು ಹೋದ ಆತ ಅಲ್ಲೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ದಮ್ಮು ಆದಿವಾಸಿ ಎಂಬುವವರಿಗೆ ಸೇರಿದ ಹೊಲದಲ್ಲಿ ಕೆಲ ದಿನಗಳ ಹಿಂದೆ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. 
 
ಮಗು ಅತ್ತಾಗ ಅತ್ತೆಗೆ ಆತ ಕೊಳವೆ ಬಾವಿಯಲ್ಲಿ ಬಿದ್ದಿರುವುದು ಅರಿವಾಗಿದೆ. ತಕ್ಷಣ ಕುಟುಂಬದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಆಕೆ  ಮಾಹಿತಿ ನೀಡಿದ್ದಾಳೆ.
 
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಜಿಲ್ಲಾಡಳಿತ ಕಾರ್ಯಾಚರಣೆಯನ್ನು ನಡೆಸಿದ್ದರು. ಆದರೆ 100 ಅಡಿ ಆಳದಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗೆ ನಡೆಸಿದ ಸರ್ವ ಪ್ರಯತ್ನಗಳು ವಿಫಲವಾದವು. ಗುರುವಾರ ರಾತ್ರಿ 8.50ಕ್ಕೆ ಆತನನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ,ಆದರೆ ಬಾಲಕ ಬದುಕುಳಿದಿಲ್ಲ ಎಂದು ವೈದ್ಯರು ಘೋಷಿಸಿದರು.
 
ಇತ್ತೀಚಿನ ದಿನಗಳಲ್ಲಿ ಮಕ್ಕಳು ತೆರೆದ ಕೊಳವೆ ಬಾವಿಗೆ ಬೀಳುವ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು ಜನರ ಬೇಜವಾಬ್ದಾರಿತನ ಮಾತ್ರ ಹಾಗೆಯೇ ಮುಂದುವರೆದಿದೆ.

ವೆಬ್ದುನಿಯಾವನ್ನು ಓದಿ