ಸ್ನೇಹಕ್ಕೆ ಸಂಬಂಧದ ಬೆಸುಗೆ: ಲಾಲು ಅಳಿಯನಾಗುತ್ತಿರುವ ಮುಲಾಯಂ ಮೊಮ್ಮಗ

ಶುಕ್ರವಾರ, 28 ನವೆಂಬರ್ 2014 (11:58 IST)
ಆತ್ಮೀಯ ಸ್ನೇಹಿತರಾದ ಸಮಾಜವಾದಿ ನಾಯಕ  ಮುಲಾಯಂ ಸಿಂಗ್ ಯಾದವ್  ಮತ್ತು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಸ್ನೇಹವೀಗ ಸಂಬಂಧವಾಗಿ ಬದಲಾಗುತ್ತಿದೆ. ಮೂಲಗಳ ಪ್ರಕಾರ ಲಾಲು ಪ್ರಸಾದ್ ಯಾದವ್ ಅವರ ಮಗಳು ರಾಜ ಲಕ್ಷ್ಮೀಯನ್ನು ಮುಲಾಯಂ ಸಿಂಗ್ ಯಾದವ್ ಅವರ ಮೊಮ್ಮಗ ತೇಜ್ ಪ್ರತಾಪ್ ಯಾದವ್ ವರಿಸಲಿದ್ದಾರೆ. ತೇಜ್ ಪ್ರತಾಪ್ ಇತ್ತೀಚಿಗೆ ಮೈನಪುರಿ ಕ್ಷೇತ್ರದಿಂದ ಸಂಸದರಾಗಿ  ಆಯ್ಕೆಯಾಗಿದ್ದಾರೆ.  ಈ ಮೊದಲು ಮುಲಾಯಂ ಸಿಂಗ್ ಯಾದವ್ ಈ ಕ್ಷೇತ್ರದ ಸಂಸದರಾಗಿದ್ದರು. 

ಆದರೆ ಸಮಾಜವಾದಿ ಪಕ್ಷದ ಯಾರೊಬ್ಬರು ಈ ಕುರಿತು ಪ್ರತಿಕ್ರಿಯಿಸುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಲಾಲು ಮತ್ತು ಮುಲಾಯಂ ಉಪಸ್ಥಿತಿಯಲ್ಲಿ ಎರಡು  ಕುಟುಂಬದ ಸದಸ್ಯರು ಬರುವ ಸೋಮವಾರ ಭೇಟಿಯಾಗಲಿದ್ದಾರೆ ಎಂದು ಮಾಹಿತಿ ಲಭಿಸಿದೆ.  ಈ ಭೇಟಿಯಲ್ಲಿ ರಾಜಲಕ್ಷ್ಮೀ ಮತ್ತು ತೇಜ್ ಪ್ರತಾಪ್ ಅವರ ನಿಶ್ಚಿತಾರ್ಥದ ದಿನಾಂಕವನ್ನು ಕೂಡ ನಿಗದಿ ಪಡಿಸಲಾಗುವುದು ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥ ಬಹುಶಃ ಡಿಸೆಂಬರ್ ಮಧ್ಯದಲ್ಲಿ ಮತ್ತು ಮದುವೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ. 
 
ಎರಡು ಕುಟುಂಬಗಳ ನಡುವೆ ಏರ್ಪಡುತ್ತಿರುವ ಈ ಸಂಬಂಧ ಜನತಾದಳ ಪರಿವಾರ ಮತ್ತೆ ಒಂದಾಗುವ ಸಾಧ್ಯತೆಗಳಿಗೆ ಬಲ ನೀಡಲಿದೆ. 

ವೆಬ್ದುನಿಯಾವನ್ನು ಓದಿ