36 ವರ್ಷದವನಿಂದ 38 ವರ್ಷದ ಮಹಿಳೆಯ ಮೇಲೆ ಆರು ವರ್ಷಗಳಿಂದ ಅತ್ಯಾಚಾರ, ಬ್ಲ್ಯಾಕ್‌ಮೇಲ್

ಶನಿವಾರ, 24 ಅಕ್ಟೋಬರ್ 2015 (15:58 IST)
ಕಂಪೆನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ಮೇಲೆ, ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಕಂಪೆನಿಯ 36 ವರ್ಷ ವಯಸ್ಸಿನ ವ್ಯವಸ್ಥಾಪಕ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. 
 
ಕಳೆದ 2009ರಲ್ಲಿ ಆಫೀಸ್ ಕ್ಯಾಬಿನ್‌ನಲ್ಲಿ ಮೊದಲ ಬಾರಿಗೆ ಎಸಗಿದ ಅತ್ಯಾಚಾರದ ವಿಡಿಯೋ ಕ್ಲಿಪ್ ಬಹಿರಂಗಪಡಿಸುವುದಾಗಿ ಮಹಿಳೆಗೆ ಬೆದರಿಸಿ, ಆರೋಪಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ 38 ವರ್ಷ ವಯಸ್ಸಿನ ಮಹಿಳೆಗೆ ಮಕ್ಕಳಿದ್ದು, ಕಳೆದ 2009ರಿಂದ ಕಂಪೆನಿಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಪಿಯನ್ನು ಸಾಗರ್ ಜೋಷಿ ಎಂದು ಗುರುತಿಸಲಾಗಿದೆ. 
 
ಆರೋಪಿಯ ವರ್ತನೆಯಿಂದ ಬೇಸತ್ತ ಮಹಿಳೆ ಕಸ್ತೂರ್‌ಬಾ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿ, ಕಳೆದ 2009ರಲ್ಲಿ ಒಂದು ದಿನ, ಕ್ಯಾಬಿನ್‌ನೊಳಗಡೆ ಬರುವಂತೆ ವ್ಯವಸ್ಥಾಪಕ ನಿರ್ದೇಶಕ ಜೋಷಿ ಕೋರಿದ್ದರು. ನಾನು ಕ್ಯಾಬಿನ್‌ನೊಳಗೆ ಬಂದ ನಂತರ ಕಾಫಿ ಕುಡಿಯಲು ಆಹ್ವಾನಿಸಿದರು. ಕಾಫಿ ಕುಡಿದ ಸ್ವಲ್ಪಹೊತ್ತಿನಲ್ಲಿಯೇ  ನನಗೆ ಪ್ರಜ್ಞೆ ತಪ್ಪಿತು. ನನಗೆ ಪ್ರಜ್ಞೆ ತಪ್ಪಿದಾಗ ಜೋಷಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅದರ ವಿಡಿಯೋ ಕೂಡಾ ಮಾಡಿ ನನಗೆ ತೋರಿಸಿದ್ದ. 
 
ನಂತರ, ಪ್ರತಿನಿತ್ಯ ಸೆಕ್ಸ್‌ನಲ್ಲಿ ಭಾಗಿಯಾಗದಿದ್ದಲ್ಲಿ ವಿಡಿಯೋ ಇಂಟರ್‌ನೆಟ್‌ನಲ್ಲಿ ಬಹಿರಂಗಪಡಿಸುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಇದರಿಂದ ಹೆದರಿದ ನಾನು ಜೋಷಿ ಹೇಳಿದ ಹಾಗೆ ಕೇಳಲು ಆರಂಭಿಸಿದೆ. 
 
ಕಳೆದ 2009ರಿಂದ 2011ರ ವರೆಗೆ ನಿರಂತರವಾಗಿ ಜೋಷಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಾನು ಉದ್ಯೋಗಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ಆದರೆ, ಅದಕ್ಕೂ ಆರೋಪಿ ಜೋಷಿ ಅವಕಾಶ ನೀಡಲಿಲ್ಲ. ನನಗೆ ಅಗತ್ಯವಾಗಿರುವಷ್ಟು ದಿನ ನೀನು ನನ್ನ ಕಚೇರಿಯಲ್ಲಿಯೇ ಕೆಲಸ ಮಾಡಬೇಕು ಎಂದು ಬೆದರಿಸಿದ. ನನ್ನ ಪತಿ ಕೆಲಸದ ನಿಮಿತ್ಯ ಸದಾ ಮನೆಯಿಂದ ದೂರವಿರುವುದರಿಂದ ಅವರಿಗೆ ಮಾಹಿತಿಯಿರಲಿಲ್ಲ. 
 
ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಲ್ಲಿ ನಾನು ಉದ್ಯೋಗಕ್ಕೆ ರಾಜೀನಾಮೆ ನೀಡಿ ಕೆಲಸಕ್ಕೆ ಹೋಗದಿರಲು ನಿರ್ಧರಿಸಿದೆ. ಆದರೆ, ಜೋಷಿ ಬೆದರಿಕೆ ಹಾಕಲು ಆರಂಭಿಸಿದ. ಬೆದರಿಕೆ ಕರೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ನಾನು ತುಂಬಾ ಅಸಮಾಧಾನ ಗೊಂಡಿದ್ದೆ. ನನ್ನ ಪತಿಗೆ ಅನುಮಾನ ಬಂದು ನನಗೆ ಒತ್ತಡ ಹೇರಿ ಕೇಳಿದಾಗ ನಡೆದ ಘಟನೆಯನ್ನು ಪತಿಗೆ ವಿವರಿಸಿದೆ. ನಂತರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಸಂಪೂರ್ಣ ವಿವರ ನೀಡಿದ್ದಾಳೆ.
 
ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ, ಬ್ಲ್ಯಾಕ್‌ಮೇಲ್ ದೂರು ದಾಖಲಾದ ನಂತರ, ಆರೋಪಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಎಂ.ರಾಮ್‌ಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ