ಮುಲಾಯಂ ಸಿಂಗ್‌ ದೇವಾಲಯ ನಿರ್ಮಿಸಲಿರುವ ಆಜಂಖಾನ್ ವಿರುದ್ಧ ಮುಸ್ಲಿಂ ಸಂಘಟನೆಗಳ ಫತ್ವಾ

ಶನಿವಾರ, 28 ಮಾರ್ಚ್ 2015 (15:54 IST)
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ದೇವಾಲಯ ನಿರ್ಮಿಸುವ ಸಚಿವ ಆಜಂ ಖಾನ್ ಪ್ರಸ್ತಾವನೆಗೆ ಪ್ರತಿಷ್ಠಿತ ಇಸ್ಲಾಮಿಕ್ -ಇನ್‌ಸ್ಟಿಟ್ಯೂಶನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಸ್ಲಿಮರಾಗಿರುವ ಆಜಂ ಖಾನ್ ನಡೆ ಇಸ್ಲಾಮ್‌ಗೆ ವಿರೋಧಿಯಾಗಿದ್ದು ಕಾನೂನುಬಾಹಿರವಾಗಿದೆ ಎಂದು ಫತ್ವಾ ಹೊರಡಿಸಿದೆ.

ಇಸ್ಲಾಂನಲ್ಲಿ ಅಲ್ಲಾಹನನ್ನು ಹೊರತುಪಡಿಸಿ ಬೇರೆ ದೇವರಿಲ್ಲವಾದ್ದರಿಂದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ದೇವಾಲಯ ನಿರ್ಮಿಸುವುದು ಇಸ್ಲಾಮ್ ಧರ್ಮಕ್ಕೆ ವಿರೋಧವಾಗಿದೆ ಎಂದು ಬರೇಲಿಯ ದರ್ಗಾ ಅಲಿ ಹಜರತ್ ಕಿಡಿಕಾರಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ದೇವಾಲಯ ನಿರ್ಮಿಸುವುದು ತಪ್ಪು. ಹಾಗೇ ನಿರ್ಮಿಸುವವರು ಇಸ್ಲಾಂ ವಿರೋಧಿಗಳಾಗಿದ್ದರಿಂದ ದಂಡನೆಗೆ ಅರ್ಹರು ಎಂದು ಗುಡುಗಿದ್ದಾರೆ.

ಗುಜರಾತ್ ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲಿಗರು ಮೋದಿ ದೇವಾಲಯ ನಿರ್ಮಿಸಿದ್ದರಿಂದ ಉತ್ತರಪ್ರದೇಶದಲ್ಲಿ ಮುಲಾಯಂ ಬೆಂಬಲಿಗರು ಅವರ ದೇವಾಲಯ ನಿರ್ಮಿಸಬೇಕು ಎಂದು ಖಾನ್ ನೀಡಿದ ಹೇಳಿಕೆಯಿಂದ ಆಕ್ರೋಶಗೊಂಡ ಮುಸ್ಲಿಂ ನಾಯಕರು ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಜನಪ್ರಿಯ ನಾಯಕರು ಅವರಿಗೆ ಲಕ್ಷಾಂತರ ಜನ ಬೆಂಬಲಿಗರಿದ್ದಾರೆ. ಜೀವಂತವಾಗಿರುವ ನಟರು ಮತ್ತು ರಾಜಕಾರಣಿಗಳ ದೇವಾಲಯಗಳು ನಿರ್ಮಾಣವಾಗಿವೆ. ಮುಲಾಯಂ ಅವರ ದೇವಾಲಯ ನಿರ್ಮಿಸಿದಲ್ಲಿ ಯಾವ ತಪ್ಪಿದೆ. ನನ್ನ ಪ್ರಸ್ತಾವನೆಯನ್ನು ಮುಲಾಯಂ ಮುಂದಿಡುತ್ತೇನೆ. ಒಂದು ವೇಳೆ ಅವರು ಒಪ್ಪಿದಲ್ಲಿ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಆಜಂಖಾನ್ ಸ್ಪಷ್ಟಪಡಿಸಿದ್ದಾರೆ.

ಪ್ರದಾನಮಂತ್ರಿ ನರೇಂದ್ರ ಮೋದಿಯವರು, ಗುಜರಾತ್‌ನಲ್ಲಿ ತಮ್ಮ ದೇವಾಲಯ ನಿರ್ಮಿಸಿದ ಸುದ್ದಿ ಕೇಳಿ ಆಘಾತಗೊಂಡು ದೇವಾಲಯ ನಿರ್ಮಿಸುವ ಬದಲು ಸ್ವಚ್ಚ ಭಾರತಕ್ಕೆ ಸಮಯ ವ್ಯಯಿಸಿ ಎಂದು ಬೆಂಬಲಿಗರಿಗೆ ಕರೆ ನೀಡಿರುವುದನ್ನು ಸ್ಮರಿಸಬಹುದು.

ವೆಬ್ದುನಿಯಾವನ್ನು ಓದಿ