ಆಕಳ ಕರುವಿನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಮುಸ್ಲಿಂ ಕುಟುಂಬ

ಶುಕ್ರವಾರ, 23 ಅಕ್ಟೋಬರ್ 2015 (12:18 IST)
ದೇಶವ್ಯಾಪಿ ಗೋಹತ್ಯೆ, ಗೋ ಮಾಂಸದ ವಿವಾದ ರಾಜಕೀಯ ಲೇಪವನ್ನು ಹಚ್ಚಿಕೊಂಡು ಕೋಲಾಹಲವನ್ನು ಎಬ್ಬಿಸಿದ್ದರೆ ಮೀರತ್‌ನ ಮುಸ್ಲಿಂ ಕುಟುಂಬವೊಂದು ತಮ್ಮ ಪ್ರೀತಿಯ ಹಸು ಜೂಲಿಯ ಹುಟ್ಟುಹಬ್ಬವನ್ನು ವೈಭವಯುತವಾಗಿ ಆಚರಿಸುವುದರಲ್ಲಿ ವ್ಯಸ್ತವಾಗಿದೆ. 

 
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಗಳ ಪ್ರಕಾರ, ನಗರದ ಸಿಕಂದರ ಗೇಟ್ ಕಾಲೋನಿ ನಿವಾಸಿ, ನೊಯ್ಡಾ ಕೆಮಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಉದ್ಯೋಗಿ 29 ವರ್ಷದ ಮೊಹಮ್ಮದ್ ಇರ್ಷಾದ್ ಅವರ ಕುಟುಂಬ ಗುರುವಾರ ತಮ್ಮ ಪ್ರೀತಿಯ ಆಕಳ ಕರುವಿನ ಒಂದು ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿತು. ಮೊಟ್ಟೆ ಬಳಸದೇ ವಿಶೇಷ ವಿನ್ಯಾಸದಲ್ಲಿ ಮಾಡಲಾಗಿದ್ದ  10ಕೆ.ಜಿ ವೆನಿಲ್ಲಾ ಕೇಕ್‌‌ನ್ನು ಆರ್ಡರ್ ಮಾಡಲಾಗಿತ್ತು. ಕೇಕ್ ಕತ್ತರಿಸುವ ಮೂಲಕ ಮುದ್ದು ಜೂಲಿಯ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬರ್ತಡೇ ಪಾರ್ಟಿಯಲ್ಲಿ ನೂರಾರು ಜನರಿಗೆ  ಆಹ್ವಾನ ಸಹ ನೀಡಲಾಗಿತ್ತು. ಬಂದ ಅತಿಥಿಗಳಿಗೆ ಪಕೋಡಾ,ಸಿಹಿತಿಂಡಿ ಹಾಗೂ ಹಣ್ಣು ನೀಡಿ ಸತ್ಕರಿಸಲಾಯಿತು. 
 
ತನ್ನ ಪ್ರಥಮ ಜನ್ಮದಿನದ ಖುಷಿಯಲ್ಲಿದ್ದ ಜೂಲಿ ಬರ್ತಡೇ ಕ್ಯಾಪ್ ತೊಟ್ಟು ಕಂಗೊಳಿಸುತ್ತಿದ್ದಳು. 
 
ಈ ಕುರಿತು ಪ್ರತಿಕ್ರಿಯಿಸುವ ಇರ್ಷಾದ್‌, "ಜೂಲಿ ಹಾಗೂ ಆಕೆಯ ತಾಯಿ ಬೂಲಿ  ನಮ್ಮ ಕುಟುಂಬದ ಸದಸ್ಯರು ಇದ್ದ ಹಾಗೇ. ಇವುಗಳನ್ನ ನಮ್ಮ ಮಕ್ಕಳಂತೆ ಆರೈಕೆ ಮಾಡುತ್ತೇವೆ. ಮನೆಯ ಸದಸ್ಯರ ಹುಟ್ಟುಹಬ್ಬವನ್ನು ಆಚರಿಸಿದಂತೆ ಇವರಿಬ್ಬರ ಹುಟ್ಟುಹಬ್ಬವನ್ನು ಸಹ ಆಚರಿಸುತ್ತೇವೆ. ಇದು ಜೂಲಿಯ ಪ್ರಥಮ ಜನ್ಮದಿನವಾದ್ದರಿಂದ ಅದ್ದೂರಿಯಾಗಿ ಆಚರಿಸಿದೆವು", ಎನ್ನುತ್ತಾರೆ.
 
ಕುಟುಂಬ ಈ ಬರ್ತಡೆಗಾಗಿ ಒಟ್ಟು 40,000 ರೂಪಾಯಿಗಳನ್ನು ಖರ್ಚು ಮಾಡಿದೆ. 
 
ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಆಹ್ವಾನಿತರು ಕಲ್ಲಂಗಡಿ, ಬಾಳೆಹಣ್ಣು, ದಾಳಿಂಬೆ ಹಣ್ಣುಗಳನ್ನು ಜೂಲಿಗೆ ಉಡುಗೊರೆಯಾಗಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ