ಮುಸ್ಲಿಮರು ಅಯೋಧ್ಯೆ, ಕಾಶಿ ಮೇಲಿರುವ ಹಕ್ಕು ಹಿಂಪಡೆಯಬೇಕು: ವಿಎಚ್‌ಪಿ

ಗುರುವಾರ, 25 ಜೂನ್ 2015 (13:28 IST)
ಅಖಿಲ್ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಶಾಂತಿ ,ಸಹಬಾಳ್ವೆಯಿಂದ ಹಿಂದು ದೇಶದಲ್ಲಿ ಬಾಳಬೇಕು ಎಂದು ಬಯಸಿದ್ದರೆ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ, ಮಥುರೆಯಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಮತ್ತು ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ್ ಮಂದಿರದ ಹಕ್ಕುಗಳನ್ನು ಕೈಬಿಡಬೇಕು ಎಂದು ವಿಶ್ವ ಹಿಂದು ಪರಿಷತ್ ಕೋರಿದೆ. 
 
ದೇಶದ ಈ ಪ್ರಮುಖ ಮೂರು ಸ್ಥಳಗಳ ಬಗ್ಗೆ ಮುಸ್ಲಿಂ ಲಾ ಬೋರ್ಡ್ ಹೊಂದಾಣಿಕೆ ತೋರಿದಲ್ಲಿ ಕೋರ್ಟ್ ಹೊರಗಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಹೇಳಿದ್ದಾರೆ. 
 
ಈ ಹಿಂದೆ ದೇಶದಲ್ಲಿದ್ದ ಸಾವಿರಾರು ದೇವಾಲಯಗಳನ್ನು ನಾಶಮಾಡಲಾಗಿದೆ. ನಾವು ಅಂತಹ ದೇವಾಲಯಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಆದರೆ, ಅಯೋಧ್ಯೆ, ಮಥುರಾ ಮತ್ತು ವಾರಣಾಸಿ ದೇವಾಲಯಗಳ ಬಗ್ಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಸಾಧ್ಯವಿಲ್ಲ ಎಂದರು.
 
ರಾಮಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಅಯೋಧ್ಯೆ, ಮಥುರಾ ಮತ್ತು ವಾರಣಾಸಿ ಮೇಲಿರುವ ಹಕ್ಕನ್ನು ಮುಸ್ಲಿಂ ಲಾ ಬೋರ್ಡ್ ಹಿಂಪಡೆದು ಇತಿಹಾಸ ಪುನರ್‌ರಚಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
 
ಮೂರು ಪವಿತ್ರ ಸ್ಥಳಗಳನ್ನು ಹಿಂದುಗಳ ವಶಕ್ಕೆ ನೀಡುವ ಮೂಲಕ ಹಿಂದು, ಮುಸ್ಲಿಮರು ಶಾಂತಿ, ಸಹೋದರತೆಯಿಂದ ಬದುಕಬಹುದಾಗಿದೆ ಎಂದು ಸಿಂಘಾಲ್ ಹೇಳಿದ್ದಾರೆ.
 
ಕೆಲ ಮುಸ್ಲಿಂ ಮೌಲ್ವಿಗಳು ಯೋಗವನ್ನು ವಿರೋಧಿಸಿರುವುದನ್ನು ಟೀಕಿಸಿದ ಸಿಂಘಾಲ್, ಯೋಗ ನಮ್ಮ ಸಂಸ್ಕ್ರತಿಗೆ ತುಂಬಾ ಹತ್ತಿರವಾಗಿದೆ.ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
 
ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿರುವ ಹಕ್ಕನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಸ್ಲಿಂ ಸಂಸ್ಥೆಗಳು ಈಗಾಗಲೇ ಸ್ಪಷ್ಟಪಡಿಸಿವೆ.
 

ವೆಬ್ದುನಿಯಾವನ್ನು ಓದಿ