ಮೋದಿ ಜತೆಗೆ ಸಾಮರಸ್ಯಪೂರ್ಣ ಸಂಬಂಧ : ರಾಜನಾಥ್ ಸಿಂಗ್

ಶನಿವಾರ, 13 ಸೆಪ್ಟಂಬರ್ 2014 (09:14 IST)
ಪ್ರಧಾನಿ ನರೇಂದ್ರ ಮೋದಿ ಜತೆಗಿನ ಭಿನ್ನಾಭಿಪ್ರಾಯದ  ವರದಿಗಳನ್ನು ತಳ್ಳಿ ಹಾಕಿರುವ ಗೃಹ ಸಚಿವ ರಾಜನಾಥ್ ಸಿಂಗ್, ತಮ್ಮಿಬ್ಬರ ಸಂಬಂಧ ಮಧುರವಾಗಿದೆ ಎಂದಿದ್ದಾರೆ.

ಎನ್‌ಡಿಎ ಅಧಿಕಾರಕ್ಕೆ ಬಂದು ಶತದಿನ ಪೂರೈಸಿದ ಸಂದರ್ಭದಲ್ಲಿ ಸುದ್ಧಿಗೋಷ್ಠಿಯೊಂದನ್ನು ಉದ್ದೇಶಿಸಿ ತಮ್ಮ ಸಚಿವಾಲಯದ ಸಾಧನೆಗಳನ್ನು ವಿವರಿಸುತ್ತಿದ್ದ ವೇಳೆ ಮೋದಿ ಜತೆಗಿನ ತಮ್ಮ ಸಂಬಂದಧ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರಾಜನಾಥ್ ಸಿಂಗ್, '' ನಮ್ಮ  ನಡುವಿನ ಸಂಬಂಧ ಹಿಂದೆ ಕೂಡ ಉತ್ತಮವಾಗಿತ್ತು ಮತ್ತು ಇಂದು ಕೂಡ  ಸಾಮರಸ್ಯಪೂರ್ಣವಾಗಿದೆ'' ಎಂದು ಹೇಳಿದರು. 
 
ಅವರು ಪ್ರಭಾವಶಾಲಿ ಪ್ರಧಾನಿ. ಅವರು ಪ್ರಧಾನಿ ಮತ್ತು  ನಾನು ಅವರ ಕೈಕೆಳಗಿರುವ ಸಚಿವ. ಅವರ ಸಂಪುಟದಲ್ಲಿ ನಾನೊಬ್ಬ ಗೃಹ ಸಚಿವ ಅಷ್ಟೆ ಎಂದು ಸಿಂಗ್ ತಿಳಿಸಿದ್ದಾರೆ.
 
ತಮ್ಮ ಮಗನ ಮೇಲಿನ ಆರೋಪಗಳು ಆಧಾರರಹಿತವಾದುದು ಎಂದ ಸಿಂಗ್, ತಮ್ಮ ಮಗ ತಪ್ಪಿತಸ್ಥನೆಂದು ಸಾಬೀತಾದರೆ ತಾನು ರಾಜಕೀಯವನ್ನು ಬಿಡುತ್ತೇನೆ ಎಂದರು.
 
ತಮ್ಮ ಸಚಿವಾಲಯದ ಕೆಲಸವನ್ನು ಕ್ರಿಕೆಟ್‌ಗೆ ಹೋಲಿಸಿದ ಅವರು, ತಮ್ಮ ಸಚಿವಾಲಯ  ಟ್ವೆಂಟಿ20 ಪಂದ್ಯ ಆಡುವುದರಲ್ಲಿ  ಅಥವಾ ಏಕದಿನ ಪಂದ್ಯವನ್ನಾಡುವುದರಲ್ಲಿ ಆಸಕ್ತಿ ಹೊಂದಿಲ್ಲ. ಬದಲಾಗಿ ನಾವು ಟೆಸ್ಟ್ ಪಂದ್ಯವನ್ನಾಡುತ್ತೇವೆ. ಅಲ್ಲಿ ಎರಡು ಇನ್ನಿಂಗ್ಸ್ ಆಡಬೇಕಾಗುತ್ತದೆ. ಜತೆಗೆ ಒಳ್ಳೆಯ ಆರಂಭ ಕೂಡ ಬೇಕಾಗುತ್ತದೆ. ನಮಗೆ ಉತ್ತಮ ಆರಂಭ ಸಿಕ್ಕಿದೆ. ಹೀಗಾಗಿ ದೊಡ್ಡ ಇನ್ನಿಂಗ್ಸ್ ಆಡುವ ಗುರಿ ನಮ್ಮದು. ಸೆಕೆಂಡ್ ಇನ್ನಿಂಗ್ಸ್ ಕೂಡ ಆಡುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ