36 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿತ್ತು ಸತ್ತ ಮಗುವಿನ ಅಸ್ಥಿಪಂಜರ

ಬುಧವಾರ, 20 ಆಗಸ್ಟ್ 2014 (11:12 IST)
ಅಪರೂಪದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ನಾಗ್ಪುರ ನಗರದ ಆಸ್ಪತ್ರೆಯೊಂದರ ವೈದ್ಯರ ತಂಡ 36 ವರ್ಷಗಳ ದೀರ್ಘ ಅವಧಿಯಿಂದ  60 ವರ್ಷದ ಮಹಿಳೆ ಗರ್ಭದಲ್ಲಿದ್ದ ಭ್ರೂಣದ ಅಸ್ಥಿಪಂಜರವನ್ನು ಯಶಸ್ವಿಯಾಗಿ ತೆಗೆದಿದ್ದಾರೆ. 

ಕಳೆದ ವಾರ ನಾಗ್ಪುರದ ಲತಾ ಮಂಗೇಶ್ಕರ್ ಆಸ್ಪತ್ರೆಗೆ ಹೊರ ರೋಗಿಯಾಗಿ ಆಗಮಿಸಿದ್ದ ಮಧ್ಯಪ್ರದೇಶದ ಪಿಪಾರಿಯಾ ನಿವಾಸಿ ಕಾಂತಾಬಾಯಿ ಗುಣವಂತ ಠಾಕ್ರೆಯವರಿಗೆ ಎನ್‌ಕೆಪಿ ಸಾಳ್ವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನುರಿತ ವೈದ್ಯರ ತಂಡ  ಶಸ್ತ್ರಚಿಕಿತ್ಸೆ ನಡೆಸಿತು. 
 
ಕಳೆದ 2 ತಿಂಗಳಿಂದ ಆಕೆ ತೀವೃ ಸ್ವರೂಪದ ಹೊಟ್ಟೆ ನೋವು, ಮೂತ್ರವ್ಯವಸ್ಥೆಯ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದರು.  ಆಕೆಯನ್ನು ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ಗಡ್ಡೆಯ ತರಹದ ವಸ್ತುವಿರುವುದನ್ನು ಸೋನೋಗ್ರಾಫಿ ಮೂಲಕ ಪತ್ತೆ ಹಚ್ಚಿದರು. ಅದು ಕಾನ್ಸರ್ ಗಡ್ಡೆ ಇರಬಹುದೆಂದು ಮೊದಲು ಊಹಿಸಲಾಯಿತಾದರೂ, ಆ ಗಡ್ಡೆ ಗಟ್ಟಿಯಾಗಿದೆ ಎಂದು ಸಿಟಿ ಸ್ಕಾನ್ ಮೂಲಕ ಬೆಳಕಿಗೆ ಬಂತು. 
 
ಎಮ್ಆರ್‌ಐ  ಸ್ಕಾನ್ ನಡೆಸಿದ ಮೇಲೆ ಅದು ಮಗುವಿನ ಅಸ್ಥಿಪಂಜರ ಎಂದು ವೈದ್ಯರಿಗೆ ಮನವರಿಕೆಯಾಯಿತು ಎನ್ನುತ್ತಾರೆ  ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಮುರ್ತಾಜಾ ಅಕ್ತರ್. 
 
ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು ಈ ಹಿಂದೆ ಈ ರೀತಿಯ ಪ್ರಕರಣಗಳು ನಡೆದಿರುವದೇ ಎಂಬುದನ್ನು ಪತ್ತೆ ಹಚ್ಚಿದಾಗ ಬೆಲ್ಜಿಯಂನ ಮಹಿಳೆಯೊಬ್ಬರ  ಗರ್ಭಧಾರಣೆಯ ಅವಶೇಷ 18 ವರ್ಷಗಳ ಕಾಲ  ಹೊಟ್ಟೆಯಲ್ಲೇ ಇದ್ದ ಕೇಸ್ ವಿವರ  ಕಂಡು ಬಂತು. 
 
ಸಾಕಷ್ಟು ಅಧ್ಯಯನ ನಡೆಸಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು  ಆಕೆಯ ಹೊಟ್ಟೆಯೊಳಗಿಂದ ಅಸ್ಥಿಪಂಜರವನ್ನು ತೆಗೆಯುವಲ್ಲಿ ಯಶಸ್ವಿಯಾದರು. ಇದು  ಗರ್ಭಕೋಶ, ಕರುಳು ಮತ್ತು ಮೂತ್ರಕೋಶದ, ನಡುವೆ  ಗಟ್ಟಿಯಾಗಿ ಅಂಟಿಕೊಂಡಿತ್ತು. ಈಗ ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ