ನೈಜಿರಿಯನ್ ಮಹಿಳೆಯರ ರೌಡಿಸಂ: ನಿರ್ವಾಹಕನ ಮೇಲೆ ಹಲ್ಲೆ

ಭಾನುವಾರ, 5 ಜುಲೈ 2015 (12:56 IST)
ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಬಸ್ ನಿರ್ವಾಹಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ನೈಜಿರಿಯನ್ ಮಹಿಳೆಯರನ್ನು ಪೊಲೀಸರು ಬಂಧಿಸಿದ ಘಟನೆ ವಿಲ್ಸನ್ ಗಾರ್ಡನ್ 10ನೇ ಅಡ್ಡರಸ್ತೆಯಲ್ಲಿ ನಡೆದಿದೆ.

ಮೆಜೆಸ್ಟಿಕ್‌ನಿಂದ ಆನೇಕಲ್ ಕಡೆ ಸಾಗುತ್ತಿದ್ದ ಬಸ್‌ನ್ನು ಹತ್ತಿದ 6 ಜನ ನೈಜಿರಿಯನ್ ಮಹಿಳೆಯರ ಬಳಿ ನಿರ್ವಾಹಕ ಟಿಕೆಟ್ ತೋರಿಸುವಂತೆ ಕೇಳಿದ್ದಾನೆ. ಅವರೆಲ್ಲರೂ ಡೈಲಿ ಪಾಸ್‌ನ್ನು ತೋರಿಸಿದ್ದಾರೆ. ಅದರಲ್ಲಿ ಸಹಿ ಮಾದಿದ್ದುದನ್ನು ಗಮನಿಸಿ ಸಹಿ ಮಾಡಿ ಎಂದು ನಿರ್ವಾಹಕ ಸೂಚನೆ ನೀಡಿದ್ದಾನೆ. ಅಷ್ಟಕ್ಕೆ ನೈಜಿರಿಯನ್ ಮಹಿಳೆಯರು ಆತನ ಮೇಲೆ ಏಕಾಏಕಿ ಹಲ್ಲೆಗೈಯ್ಯಲು ಪ್ರಾರಂಭಿಸಿದ್ದಾರೆ.  
 
ವಿವಾದ ತಾರಕಕ್ಕೇರಿದ್ದರಿಂದ ಚಾಲಕ ಬಸ್‌ನ್ನು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಕಡೆ ತಿರುಗಿಸಿದ್ದಾನೆ. ಅಲ್ಲಿ ಒಟ್ಟುಗೂಡಿದ ಉಳಿದ ಬಸ್ ಚಾಲಕರು ಮತ್ತು ನಿರ್ವಾಹಕರು ಘಟನೆಯನ್ನು ಖಂಡಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. 
 
ತಕ್ಷಣ ಪೊಲೀಸರು 6 ಜನ ನೈಜಿರಿಯನ್ ಮಹಿಳೆಯರನ್ನು ಬಂಧಿಸಿದ್ದಾರೆ. ಅವರಲ್ಲಿ 4 ಮಂದಿ ಮಾತ್ರ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಈ ದೃಶ್ಯಾವಳಿಗಳ ವಿಡಿಯೋ ಚಿತ್ರೀಕರಣವನ್ನು ಮಾಡಿಕೊಂಡಿದ್ದಾರೆ. 
 
ಗಾಯಗೊಂಡಿರುವ ನಿರ್ವಾಹಕ ದೇವೇಗೌಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ವೆಬ್ದುನಿಯಾವನ್ನು ಓದಿ