ಮಹಾರಾಷ್ಟ್ರ: ಕೈಗಾರಿಕೆ ಸಚಿವ ನಾರಾಯಣ್ ರಾಣೆ ರಾಜೀನಾಮೆ

ಸೋಮವಾರ, 21 ಜುಲೈ 2014 (14:03 IST)
ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸದಿರುವುದನ್ನು ವಿರೋಧಿಸಿ ಕೈಗಾರಿಕೆ ಖಾತೆ ಸಚಿವ ನಾರಾಯಣ್ ರಾಣೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
 
ಮುಂದಿನ ಸೋಮವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧರಿಸುವುದಾಗಿ ಕಳೆದ ವಾರವೇ ರಾಣೆ ಪ್ರಕಟಿಸಿದ್ದರು. 
 
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಅವರು, ಗೋಪಿನಾಥ್ ಮುಂಡೆಯವರು ನಿಧನರಾಗಿದ್ದಾಗ ಮಾತ್ರ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ್ದೆ. ನಂತರ ಅವರನ್ನು ಭೇಟಿ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷವಾದ ಎನ್‌ಸಿಪಿ ರಾಜ್ಯದ 48 ಕ್ಷೇತ್ರಗಳಲ್ಲಿ ಕೇವಲ ಆರು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಇದೀಗ ರಾಣೆಯವರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
 
ಕಳೆದ 2005ರಲ್ಲಿ ಶಿವಸೇನೆ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಗ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿತ್ತು. ಇದೀಗ ಉಲ್ಡಾ ಹೊಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
 
 
 

ವೆಬ್ದುನಿಯಾವನ್ನು ಓದಿ