ಮೋದಿ-ಅಮಿತ್ ಶಾ ಮುಂದಿನ ಟಾರ್ಗೆಟ್ ಕರ್ನಾಟಕ..?

ಶನಿವಾರ, 11 ಮಾರ್ಚ್ 2017 (13:04 IST)
ಲೋಕಸಭಾ ಚುನಾವಣೆಯಲ್ಲಿದ್ದ ನರೇಂದ್ರಮೋದಿ ಹವಾ ಈಗಲೂ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಸಮೀಕ್ಷೆಗಳ ನಿರೀಕ್ಷೆಯನ್ನೂ ಮೀರಿ ಬಿಜೆಪಿ ಕಮಾಲ್ ಮಾಡಿದೆ. ಪ್ರಚಂಡ ಬಹುಮತ ಪಡೆದಿರುವ ಬಿಜೆಪಿ, ಗದ್ದುಗೆ ಏರಲು ಸಜ್ಜಾಗಿದೆ. ಉತ್ತಾರಖಂಡ್`ನಲ್ಲೂ ಕಾಂಗ್ರೆಸ್ ಸೋಲಿಸಿರುವ ಬಿಜೆಪಿ ಗೆಲುವಿನ ಸಿಹಿ ಪಡೆದಿದೆ. ಉತ್ತರದಲ್ಲಿ ಯಶಸ್ಸು ಕಂಡ ಮೋದಿ ಮತ್ತು ಅಮಿತ್ ಶಾ ಅವರ ಮುಂದಿನ ಟಾರ್ಗೆಟ್ ಕರ್ನಾಟಕ ಎಂದೇ ವಿಶ್ಲೇಷಿಸಲಾಗುತ್ತಿದೆ. 


ದಕ್ಷಿಣದತ್ತ ಮೋದಿ ಚಿತ್ತ: ಉತ್ತರದಲ್ಲಿ ಯಶಸ್ಸು ಕಂಡ ಮೋದಿ ಮತ್ತು ಅಮಿತ್ ಶಾ ದಕ್ಷಿಣದಲ್ಲೂ ಆಧಿಪತ್ಯ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಕರ್ನಾಟಕವನ್ನ ಹೆಬ್ಬಾಗಿಲಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನ ಗೆದ್ದಿತ್ತು. ಹೀಗಾಗಿ, ಮೋದಿ ಹವಾ ಬಳಸಿಕೊಂಡೇ ಕರ್ನಾಟಕದಲ್ಲೂ ಬಿಜೆಪಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಉಳಿದಿದ್ದು, ಇವತ್ತಿನ ಪಂಚ ರಾಜ್ಯಗಳ ಫಲಿತಾಂಶದ ಪ್ರಭಾವ ಸಹ ಬೀರಲಿದೆ ಎನ್ನಲಾಗುತ್ತಿದೆ. ಉತ್ತರಪ್ರದೇಶದ ರೀತಿಯೇ ಅಮಿತ್ ಶಾ ಇಲ್ಲಿಯೂ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ.

ತೆಲಂಗಾಣ-ಆಂಧ್ರದ ಕಡೆಗೂ ಚಿತ್ತ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಬಳಸಿಕೊಂಡು ಬಿಜೆಪಿ ಗೆದ್ದಿದ್ದೇ ಆದಲ್ಲಿ ಅನಂತರದಲ್ಲಿ ಬರಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲೂ ಪಕ್ಷದ ಬಲವರ್ಧನೆಗೆ ಅಮಿತ್ ಶಾ ತಂತ್ರ ರೂಪಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ತಕ್ಕಮಟ್ಟಿನ ಯಶಸ್ಸು ಕಂಡಿತ್ತು.

ತಮಿಳುನಾಡಿಗೂ ಲಗ್ಗೆ: ಜಯಲಲಿತಾ ನಿಧನದ ಬಳಿಕ ಅಣ್ಣಾಡಿಎಂಕೆ ಪಕ್ಷದಲ್ಲಿ ಅಷ್ಟು ಪ್ರಭಾವಿ ನಾಯಕರಿಲ್ಲ. ಶಶಕಲಾ ಜೈಲಲಿದ್ದು, ಪನ್ನೀರ್ ಸೆಲ್ವಂ ಬಂಡಾಯವೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಪನ್ನೀರ್ ಜೊತೆಗೂಡಿ ಬಿಜೆಪಿ ತಮಿಳುನಾಡಿಗೂ ದಾಂಗುಡಿ ಇಟ್ಟರೂ ಅಚ್ಚರಿ ಇಲ್ಲ.

ವೆಬ್ದುನಿಯಾವನ್ನು ಓದಿ