ಕಾಂಗ್ರೆಸ್ ದುರಾಡಳಿತವೇ ಮೋದಿ ಪ್ರಧಾನಿಯಾಗಲು ಮೂಲ ಕಾರಣ: ಅಕ್ಬರುದ್ದೀನ್ ಓವೈಸಿ

ಸೋಮವಾರ, 5 ಅಕ್ಟೋಬರ್ 2015 (15:12 IST)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ದುರಾಡಳಿತದಿಂದ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕಾರಿಯಾಯಿತು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್ ನಾಯಕ ಅಕ್ಬರುದ್ದೀನ್ ಓವೈಸಿ ಆರೋಪಿಸಿದ್ದಾರೆ.
 
ಬಾಬ್ರಿ ಮಸೀದಿ ವಿನಾಶಕ್ಕೆ ಕಾಂಗ್ರೆಸ್ ಪಕ್ಷವೇ ಸಂಪೂರ್ಣ ಹೊಣೆಯಾಗಿದೆ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಮೋದಿ ಪ್ರಧಾನಿ ಹುದ್ದೆ ಅಲಂಕರಿಸುವಂತಾಯಿತು ಎಂದು ಹೇಳಿದ್ದಾರೆ.
 
ಅಸಾದುದ್ದೀನ್ ಓವೈಸಿ ಸಹೋದರರಾಗಿರುವ ಅಕ್ಬರುದ್ದೀನ್ ಓವೈಸಿ ಮಾತನಾಡಿ, ಕಳೆದ 200ರಲ್ಲಿ ಗುಜರಾತ್‌ನಲ್ಲಿ ದಂಗೆಯಾದಾಗ ಮೋದಿ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ದಂಗೆಯ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡು ಮೋದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸುತ್ತಿದ್ದಲ್ಲಿ ಮೋದಿ ಇಂದು ಪ್ರಧಾನಿಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.   
 
ಬಾಬ್ರಿ ಮಸೀದಿಯನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಿದ್ದು ಕಾಂಗ್ರೆಸ್ ಸರಕಾರವಾಗಿದ್ದರೆ ಅದನ್ನು ನಾಶಗೊಳಿಸಿದ್ದು ಬಿಜೆಪಿ ಸರಕಾರ ಎಂದು ವಾಗ್ದಾಳಿ ನಡೆಸಿದರು.
 
ಪ್ರಧಾನಿ ಮೋದಿ ಅಧಿಕಾರವಹಿಸಿಕೊಂಡು 15 ತಿಂಗಳುಗಳು ಕಳೆದರೂ ಎಲ್ಲಿವೆ ಅಚ್ಚೇ ದಿನ್ ಎಂದು ಪ್ರಶ್ನಿಸಿದ ಅವರು, ಅನಿವಾಸಿ ಭಾರತೀಯ ಪ್ರಧಾನಿಯಾದ ಮೋದಿ, ನಮ್ಮ ದೇಶದ ಸಂವಿಧಾನದ ಬದಲಿಗೆ ಭಗವದ್ಗೀತೆಯನ್ನು ಪಾಲಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.  
 
ತೆಲಂಗಾಣ ಶಾಸಕರಾದ ಅಕ್ಬರುದ್ದೀನ್ ಓವೈಸಿ, ಎಐಎಂಐಎಂ ಅಭ್ಯರ್ಥಿಯಾದ ಅಖ್ತರುಲ್ ಇಮಾನ್ ಪರವಾಗಿ ಕೊಛಾಧಾಮನ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.  

ವೆಬ್ದುನಿಯಾವನ್ನು ಓದಿ