ನೇಪಾಳದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಥಮ ವಿದೇಶಿ ನಾಯಕ ಮೋದಿ

ಶನಿವಾರ, 26 ಜುಲೈ 2014 (18:31 IST)
ಮುಂದಿನ ತಿಂಗಳ ಆರಂಭದಲ್ಲಿ ಎರಡು ದಿನಗಳ ನೇಪಾಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅಗಸ್ಟ್ 4ರಂದು ನೇಪಾಳದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ 1990ರಲ್ಲಿ ಪ್ರಜಾಪ್ರಭುತ್ವ ಪುನರ್ ಪ್ರತಿಷ್ಠಾಪಿತವಾದ ನಂತರ ನೇಪಾಳ ಸಂಸತ್ತಿನಲ್ಲಿ ಮಾತನಾಡಲಿರುವ ಪ್ರಥಮ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.



 
 
ಕಳೆದ ತಿಂಗಳಲ್ಲಿ ಭೂತಾನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕೆಲವು ದಿನಗಳ ಹಿಂದೆ ಬ್ರಿಕ್ಸ್ ಸಮಾವೇಶದಲ್ಲಿ ತಮ್ಮ ವಿಶೇಷ ಝಲಕ್ ತೋರಿದ್ದರು. 
 
ಪ್ರಧಾನಿ ಮೋದಿ ಒಂದು ವಿಧದಲ್ಲಿ ಜಾಗತಿಕ ನಾಯಕರಾಗ ಹೊರಟಿದ್ದಾರೆ ಎನ್ನಿಸುತ್ತಿದೆ. ನ್ಯೂಯಾರ್ಕಿನ  ಐತಿಹಾಸಿಕ ಮ್ಯಾಡಿಸನ್ ಸ್ಕ್ವೆರ್ ಗಾರ್ಡನ್‌ನಲ್ಲಿ ಸದ್ಯದಲ್ಲಿಯೇ ಅವರು 20,000 ಸಂಖ್ಯೆಯ ಆನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನೀವು ಕೇಳಿರಬಹುದು. ಅದು ಹಿಂದೆ ಭೇಟಿ ನೀಡಿದ ಎಲ್ಲ ಪ್ರಧಾನಮಂತ್ರಿಗಳ ಆಹ್ವಾನ ಕಾರ್ಯಕ್ರಮವನ್ನು ಮೀರಿದ ಸಮಾವೇಶ ಎನ್ನಿಸಿಕೊಳ್ಳಲಿದ್ದು ದೇಶದ ರಾಜಕೀಯ ವಿದ್ಯಮಾನದಲ್ಲಿ ಅತಿ ಮಹತ್ವದ್ದೆನಿಸಲಿದೆ. 
 
ದೇಶ 7 ವರ್ಷಗಳಿಂದ ಹೊಸ ಸಂವಿಧಾನವನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನಿಸುತ್ತಿದ್ದು, ಈಗ ಅದರ ಕರಡನ್ನು ಹೊರ ತರುತ್ತಿದೆ. ಈ ಸಂದರ್ಭದಲ್ಲಿ ಮೋದಿಯವರು ಸಂಸತ್ತನ್ನು ಉದ್ದೇಶಿಸಿ ಮಾತನ್ನಾಡುತ್ತಿರುವುದು ಮತ್ತೊಂದು ವಿಶೇಷವೆನಿಸಿದೆ. 
 
ಕಾರ್ಯಕ್ರಮದ ವೇಳಾಪಟ್ಟಿಯ ಪ್ರಕಾರ ಹಿಂದುಗಳು ಶಿವನನ್ನು ಪೂಜಿಸಲು ಶ್ರೇಷ್ಠವಾದ ವಾರ ಎಂದು ಪರಿಗಣಿಸುವ ಸೋಮವಾರದಂದು ( ಅಗಸ್ಟ್4 ) ಮೋದಿಯವರು ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 
 
ಮೋದಿಯವರ ಭೇಟಿಯ ಪೂರ್ವ ತಯಾರಿಯಾಗಿ ನಾವು ದೇವಸ್ಥಾನದ  ಸುತ್ತಲೂ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು  ಪ್ರಾರಂಭಿಸಿದ್ದೇವೆ ಎಂದು  ಪಶುಪತಿ ಪ್ರದೇಶಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಗೋವಿಂದ ಟಂಡನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ