ಸಚಿವ ಸಂಪುಟ ರಚನೆ: ನರೇಂದ್ರ ಮೋದಿ-ಆಡ್ವಾಣಿ ಚರ್ಚೆ

ಭಾನುವಾರ, 18 ಮೇ 2014 (15:57 IST)
ಭಾವಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ್ದು, ತಮ್ಮ ಮುಂದಿನ ಸಚಿವ ಸಂಪುಟದ ಕುರಿತು ಚರ್ಚೆ ನಡೆಸಿದ್ದಾರೆ.
 
ನವದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರು ಸುಮಾರು 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ ತಮ್ಮ ಮುಂದಿನ ಸಚಿವ ಸಂಪುಟದ ಪಟ್ಟಿ ತಯಾರಾಗಿದ್ದು, ಈ ಬಗ್ಗೆ ಚರ್ಚೆಸಿ ಅಡ್ವಾಣಿ ಅವರ ಸಲಹೆ ಪಡೆಯಲು ನರೇಂದ್ರ ಮೋದಿ ಅವರು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಲೋಕಸಭೆಯ ಸ್ಪೀಕರ್ ಸ್ಥಾನಕ್ಕಾಗಿ ಅಡ್ವಾಣಿ ಅವರನ್ನು ಮನವೊಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
 
ಇದಾದ ಬಳಿಕ ನವದೆಹಲಿಯಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, ಸಚಿವ ಸಂಪುಟ ಪಟ್ಟಿ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಅಂಗ ಪಕ್ಷ ಎಲ್‌ಜೆಪಿಯ ಮುಖಂಡರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲಿಯೇ ನರೇಂದ್ರ ಮೋದಿ ಅವರು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
 
ಮುಂದುವರೆದ ಸಚಿವ ಸ್ಥಾನ ಆಕಾಂಕ್ಷಿಗಳ ಲಾಭಿ
 
ನೂತನ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಸಿದ್ಧತೆ ನಡೆಸಿಕೊಳ್ಳುತ್ತಿರುವಂತೆಯೇ ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯತೊಡಗಿದೆ. ಇನ್ನು ಕರ್ನಾಟಕ ರಾಜ್ಯದ ಪರವಾಗಿ ಸಂಸದ ಅನಂತ್ ಕುಮಾರ್ ಮತ್ತು ಇದೇ ಮೊದಲ ಬಾರಿಗೆ ಶಿವಮೊಗ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಮೇಲೆ ತೀವ್ರ ಒತ್ತಡಹಾಕಿದ್ದಾರೆ.
 
ಇಂದು ಬೆಳಗ್ಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಅನಂತ್ ಕುಮಾರ್ ಅವರು ಸಚಿವ ಸ್ಥಾನದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೇಯ ನರೇಂದ್ರ ಮೋದಿ ಅವರನ್ನು ಗುಜರಾತ್ ಭವನದಲ್ಲಿ ಭೇಟಿ ಮಾಡಿದ್ದ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ನಾಗಾಲ್ಯಾಂಡ್ ಮುಖ್ಯಮಂತ್ರಿ ನಾಫ್ಯೂ ರಿಯೋ ಅವರು ಭೇಟಿ ಮಾಡಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
 

ವೆಬ್ದುನಿಯಾವನ್ನು ಓದಿ