ಮೋದಿ ಗೆಲುವು ಮುಸ್ಲಿಮರು ಜಾತ್ಯಾತೀತರೆಂಬುದನ್ನು ತೋರಿಸುತ್ತದೆ : ಅಜಂ ಖಾನ್

ಮಂಗಳವಾರ, 20 ಮೇ 2014 (11:26 IST)
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಭೂತಪೂರ್ಣ ಗೆಲುವಿಗೆ ಮುಸ್ಲಿಮರು ಸಹ ಕಾರಣರಾಗಿದ್ದಾರೆ, ಈ ಮೂಲಕ ಮುಸ್ಲಿಮರು ತಾವು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಗಮನ ಸೆಳೆಯುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ.  
 
ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಲು ಮುಸ್ಲಿಂ ಯೋಧರು ಕಾರಣ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಸಪಾ ನಾಯಕ ಅಜಂ ಖಾನ್, ಚುನಾವಣೆಯ ಸಮಯದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಪದೇ ಪದೇ  ಪ್ರಚೋದನಕಾರಿ ಮಾತುಗಳನ್ನಾಡಿ ಚುನಾವಣಾ ಆಯೋಗದಿಂದ ಬಿಸಿ ಮುಟ್ಟಿಸಿ ಕೊಂಡಿದ್ದರು. ಅವರ ಮಾತುಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸ ಬಹುದೆಂಬ ಕಾರಣದಿಂದ ಆಯೋಗ ಅವರ ಪ್ರಚಾರ ಸಭೆಗಳಿಗೆ ನಿಷೇಧ ಹೇರಿತ್ತು. 
 
ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವಂತೆ  ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಸಲ್ಲಿಸಿದ್ದ ಖಾನ್, 2002 ಗೋಧ್ರಾ ಹಿಂಸಾಚಾರದ ಕುರಿತಂತೆ ಮೋದಿಯವರನ್ನು ಪದೇ ಪದೇ ಹೀಗಳೆಯುತ್ತಿದ್ದರು. ಒಮ್ಮೆ ಮೋದಿಯನ್ನು ದೂಷಿಸುತ್ತ "ಬಿಜೆಪಿ ಪ್ರಧಾನಿ ಅಭ್ಯರ್ಥಿ ನಾಯಿಮರಿಗಳ ಹಿರಿಯ ಸಹೋದರ" ಎಂದಿದ್ದರು. 
 
ಸೋಮವಾರ ಉತ್ತರಪ್ರದೇಶದಲ್ಲಿ ಮಾತನಾಡುತ್ತಿದ್ದ ಖಾನ್, ನರೇಂದ್ರ ಮೋದಿಯವರ ಗೆಲುವು ಭಾರತೀಯ ಮುಸ್ಲಿಮರು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
 
"ಮುಸ್ಲಿಂ ಮತದಾರರು ಯಾರನ್ನು ಸೋಲಿಸ ಬೇಕೆಂಬ ರಾಜಕೀಯ ಅಜೆಂಡಾವನ್ನು ಹೊಂದಿರಲಿಲ್ಲ.  ಕಾರಣ,  ಸುಳ್ಳು ಭರವಸೆಗಳನ್ನು ನಂಬಿದ ಅವರು ಇಂತಹ ರಾಜಕೀಯ ಪಕ್ಷಕ್ಕೂ  ಬೆಂಬಲ ನೀಡಿದರು" ಎಂದು ಖಾನ್ ಅಭಿಪ್ರಾಯ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ