ಸೆಪ್ಟೆಂಬರ್ 28 ರಂದು ಪ್ರಧಾನಿ ಮೋದಿ-ಬರಾಕ್ ಒಬಾಮಾ ಭೇಟಿ

ಬುಧವಾರ, 2 ಸೆಪ್ಟಂಬರ್ 2015 (20:28 IST)
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 70ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕೆಗೆ ತೆರಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಸ, ಸೆಪ್ಟೆಂಬರ್ 28 ರಂದು ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
   
ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 24 ಮತ್ತು 25 ರಂದು ಪ್ರಧಾನಿ ಮೋದಿ ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ನಂತರ ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 27 ರಂದು ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
 
ಮಾರನೇ ದಿನ ವಾಷಿಂಗ್ಟನ್‌ಗೆ ಆಗಮಿಸುವ ಮೋದಿ ಅದ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 
 
ಸೆಪ್ಟೆಂಬರ್ ತಿಂಗಳಲ್ಲಿ ಐದು ದಿನಗಳ ಅಮೆರಿಕ ಪ್ರವಾಸ ಹಮ್ಮಿಕೊಂಡಿರುವ ಮೋದಿ, ಜಾಗತಿಕ ಕಂಪೆನಿಗಳ ಸಿಇಒಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
 
ಭಾರತದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ಅನಿವಾಸಿ ಭಾರತೀಯರನ್ನು ಪ್ರಧಾನಮಂತ್ರಿ ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಜನೆವರಿ ತಿಂಗಳಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾರತಕ್ಕೆ ಭೇಟಿ ನೀಡಿರುವುದನ್ನು ಸ್ಮರಿಸಬಹುದು.  

ವೆಬ್ದುನಿಯಾವನ್ನು ಓದಿ