ನ್ಯಾಶನಲ್ ಹೆರಾಲ್ಡ್ :ಪ್ರಾಥಮಿಕ ತನಿಖೆ ಪ್ರಾರಂಭಿಸಿದ ಇಡಿ, ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌

ಶುಕ್ರವಾರ, 1 ಆಗಸ್ಟ್ 2014 (14:50 IST)
ನ್ಯಾಷನಲ್ ಹೆರಾಲ್ಡ್ ಮಾಲೀಕತ್ವವನ್ನು ಸ್ವಾಧೀನಕ್ಕೆ ಪಡಿಸಿಕೊಂಡ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ವಿರುದ್ಧದ ಮೋಸ ಮತ್ತು ವಿಶ್ವಾಸ ವಂಚನೆ ಆರೋಪದ ಪ್ರಾಥಮಿಕ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ. 

ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯ ಸ್ವಾಮಿ ಕಾಂಗ್ರೆಸ್ ನಾಯಕಿ ಮತ್ತು ಆಕೆಯ ಪುತ್ರನ ವಿರುದ್ಧ ಈ ಕೇಸ್ ದಾಖಲಿಸಿದ್ದರು. 
 
ಪ್ರಕರಣದ ನಿಖರತೆಯನ್ನು ತಿಳಿಯಲು ಜಾರಿ ನಿರ್ದೇಶನಾಲಯ  ತನಿಖೆಯನ್ನು ಕೈಗೊಂಡಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ.  
 
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಮತ್ತು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಕೇಳಲು ದೆಹಲಿ ಹೈ ಕೋರ್ಟ್ ನಿರ್ಧರಿಸಿದ್ದರಿಂದ  ಜಾರಿ ನಿರ್ದೇಶನಾಲಯ ತನಿಖೆಯನ್ನು ಪ್ರಾರಂಭಿಸಿದೆ. 
 
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಲೀಕತ್ವವನ್ನು ಪಡೆದು ಮೋಸ ಮತ್ತು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ  ಮೇಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದು , ಈ ಸಂಬಂಧ ಕಳೆದ ಜೂನ್ ತಿಂಗಳಲ್ಲಿ ನ್ಯಾಯಾಲಯ ತಾಯಿ ಮಗನಿಗೆ ಸಮ್ಮನ್ಸ್ ಜಾರಿ ಮಾಡಿತ್ತು. 
 
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ಗೆದ್ದು, ಅಧಿಕಾರ  ಪಡೆದಿರುವ ಬಿಜೆಪಿ ಸೇಡಿನ ಮನೋವೃತ್ತಿ ತೋರುತ್ತಿದೆ ಎಂದು ಆಪಾದಿಸಿದೆ. 

ವೆಬ್ದುನಿಯಾವನ್ನು ಓದಿ