ನಟವರ್‌ಸಿಂಗ್ ಪುಸ್ತಕದಲ್ಲಿ ಸತ್ಯಾಂಶವಿಲ್ಲ, ನನ್ನ ಪುಸ್ತಕ ನಾನೇ ಬರೆಯುತ್ತೇನೆ; ಸೋನಿಯಾ

ಗುರುವಾರ, 31 ಜುಲೈ 2014 (15:22 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದರು ಎಂಬ ಮಾಜಿ ಕೇಂದ್ರ ಸಚಿವ ನಟವರ್‌ಸಿಂಗ್ ಹೇಳಿಕೆಗೆ ತಿರುಗೇಟು ನೀಡಿರುವ ಸೋನಿಯಾ ಗಾಂಧಿ ಅವರು ಇದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
 
ನಟವರ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ನನ್ನ ಬಗ್ಗೆ ನಾನೇ ಪುಸ್ತಕ ಬರೆಯುತ್ತೇನೆ. ಅದರಲ್ಲಿ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.
 
ಇಂತಹ ಹೇಳಿಕೆಗಳು ಈ ಹಿಂದೆಯೂ ಬಂದಿದ್ದವು ಹೀಗಾಗಿ ಇಂತಹ ವಿಚಾರಗಳಿಂದ ನಾನು ಸ್ಧೈರ್ಯ ಕಳೆದುಕೊಳ್ಳುವುದಿಲ್ಲ. ನನ್ನ ಪತಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಹತ್ಯೆಯಾದಾಗಲು ನಾನು ಸ್ಥೈರ್ಯ ಕಳೆದುಕೊಂಡಿರಲಿಲ್ಲ. ಅದೇ ರೀತಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರನ್ನು ಗುಂಡಿಟ್ಟು ಕೊಂದಾಗಲು ನನ್ನ ಆತ್ಮ ಸ್ಥೈರ್ಯ ಕುಂದಿರಲಿಲ್ಲ ಎಂದು ಹೇಳಿದ್ದಾರೆ.
 
ಕಾಂಗ್ರೆಸ್‌ನ ಒಳ ಸತ್ಯಗಳನ್ನು ಹೊತ್ತು ಹೊರ ಬರುತ್ತಿರುವ ಮಾಜಿ ಕೇಂದ್ರ ಸಚಿವ ನಟವರ್ ಸಿಂಗ್ ಅವರ 'ಒನ್ ಲೈಫ್ ಈಸ್ ನಾಟ್ ಇನಫ್‌' ಆತ್ಮ ಚರಿತ್ರೆ ಪುಸ್ತಕ ಕುರಿತಾಗಿ ನಿನ್ನೆ ಸಂದರ್ಶನವೊಂದರಲ್ಲಿ ಮಾತನಾಡಿದರು.
 
ಸಂದರ್ಶನದ ವೇಳೆ 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿರುವುದು ಸೋನಿಯಾ ಗಾಂಧಿ ನಿರ್ಧಾರವಲ್ಲ. ಅವರು ಪ್ರಧಾನಿಯಾದರೆ ಅಪ್ಪ (ರಾಜೀವ್‌ಗಾಂಧಿ) ಮತ್ತು ಅಜ್ಜಿ (ಇಂದಿರಾ)ರಂತೆಯೇ ಕೊಲೆಯಾಗಬಹುದು ಎಂಬ ಭಯ ರಾಹುಲ್‌ರಲ್ಲಿತ್ತು. ಹೀಗಾಗಿ ಪ್ರಧಾನಿ ಹುದ್ದೆ ಸ್ವೀಕರಿಸದಂತೆ ಅವರು ಸೋನಿಯಾಗೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದು ಸೋನಿಯಾ ಪ್ರಧಾನಿ ಹುದ್ದೆ ನಿರಾಕರಿಸುವ ನಿರ್ಧಾರ ಕೈಗೊಂಡರು ಎಂದು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
 
ಇಂತಹ ಅಂಶಗಳನ್ನು ಪುಸ್ತಕದಿಂದ ಕೈಬಿಡುವಂತೆ ಈ ಹಿಂದೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಮನವಿ ಮಾಡಿದ್ದರು. ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಪುಸ್ತಕವನ್ನು ಹೊರ ತರುವುದಾಗಿ ನಟವರ್ ಹೇಳಿ ಕೊನೆ ಆಡಿದ್ದರು. ನಟವರ್‌ರ ಪುಸ್ತಕ ಹೊರ ಬರುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ನಡುಕ ಉಂಟುಮಾಡಿದೆ.

ವೆಬ್ದುನಿಯಾವನ್ನು ಓದಿ