ಸೋನಿಯಾ ಪ್ರಧಾನಿಯಾಗುದನ್ನು ತಡೆದಿದ್ದು, ಅಂತರಂಗದ ಕರೆಯಲ್ಲ ,ಮಗ ರಾಹುಲ್ ಗಾಂಧಿ
ಗುರುವಾರ, 31 ಜುಲೈ 2014 (10:08 IST)
2004ರಲ್ಲಿ ಭಾರತದ ಪ್ರಧಾನಿ ಹುದ್ದೆಗೇರುವ ಅವಕಾಶ, ಆಸೆ ಇದ್ದರೂ ಮಗನ ಒತ್ತಾಯದ ಮೇರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆ ಹುದ್ದೆಯನ್ನು ತ್ಯಜಿಸಿದರು ಎಂದು ಕೇಂದ್ರದ ಮಾಜಿ ಸಚಿವ, ಕೆ.ನಟವರ್ ಸಿಂಗ್ ಹೇಳಿದ್ದಾರೆ. ತಂದೆ ರಾಜೀವ್ ಗಾಂಧಿಯಂತೆ ತಾಯಿಯ ಹತ್ಯೆ ಆಗಬಹುದೆಂಬ ಆತಂಕ ರಾಹುಲ್ ಅವರು ತಾಯಿ ದೇಶದ ಉನ್ನತ ಹುದ್ದೆಗೇರುವುದನ್ನು ತಡೆಯುವಂತೆ ಮಾಡಿತು ಎಂಬುದು ಸಿಂಗ್ ಅಭಿಪ್ರಾಯ.
ಈ ಹಿಂದೆ ಗಾಂಧಿ ಪರಿವಾರಕ್ಕೆ ಅತ್ಯಂತ ನಿಕಟರಾಗಿದ್ದ ನಟವರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿರುವ ತಮ್ಮ ಪುಸ್ತಕದಲ್ಲಿ ಅವರು ಕೋಲಾಹಲವನ್ನೆಸಬಹುದಾದಂತ ಕೆಲವು ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪ್ರಕಾರ 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಜಿಸಲು ಮುಖ್ಯ ಕಾರಣ ರಾಹುಲ್ ಗಾಂಧಿಯಂತೆ. ಇಂತಹ ಕೆಲವು ಬಿಸಿಬಿಸಿಯಾದ ವಿಷಯಗಳನ್ನು ಹೊತ್ತು ಪ್ರಕಟವಾಗುತ್ತಿರುವ ಸಿಂಗ್ ಆತ್ಮಕಥೆ ಒನ್ ಲೈಫ್ ಇಸ್ ನಾಟ್ ಇನಪ್ (One Life is Not Enough: An Autobiography) ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡುತ್ತಿದೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡುತ್ತಿದ್ದ ಸಿಂಗ್ ತಮ್ಮ ಪುಸ್ತಕದಲ್ಲಿರುವ ಕೆಲವು ಮಹತ್ವದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ನನ್ನ ಅಂತರಂಗದ ಕರೆಗೆ ಮನ್ನಣೆ ಕೊಟ್ಟು ನಾನು ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದೇನೆ ಎಂದು ಆ ಸಮಯದಲ್ಲಿ ಸೋನಿಯಾರವರು ಹೇಳಿದ್ದು ಸತ್ಯಕ್ಕೆ ದೂರವಾದ ಮಾತು. ಬದಲಾಗಿ ತಮ್ಮ ತಾಯಿ ಪ್ರಧಾನಿ ಹುದ್ದೆಗೇರುವುದನ್ನು ತಡೆಯಲು ಸಾಧ್ಯವಾದ ಎಲ್ಲ ಹೆಜ್ಜೆಗಳನ್ನು ನಾನು ತುಳಿಯುತ್ತೇನೆ ಎಂದು ರಾಹುಲ್ ಆ ಸಮಯದಲ್ಲಿ ದೃಢವಾಗಿ ನಿರ್ಧರಿಸಿದ್ದರು. ತನ್ನ ತಾಯಿ ಪ್ರಧಾನಿಯಾದರೆ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವರಂತೆ ಹತ್ಯೆಯಾಗಬಹುದೆಂಬ ಭಯ ರಾಹುಲ್ ಅವರನ್ನು ಕಾಡುತ್ತಿತ್ತಂತೆ. ....
ಮುಂದಿನ ಪುಟದಲ್ಲಿ..........
ಈ ಬಗ್ಗೆ ಯೋಚಿಸಲು ತನ್ನ ತಾಯಿಗೆ ರಾಹುಲ್ 24 ಗಂಟೆ ಸಮಯ ನೀಡಿದ್ದರು. ಆದರೆ ತನ್ನ ಕಡೆಯಿಂದ ಅದಾಗಲೇ ತಮ್ಮ ನಿರ್ಣಯವನ್ನು ರಾಹುಲ್ ಹೇಳಿಯಾಗಿತ್ತು. ಕೊನೆಗೂ ಮಗನ ಒತ್ತಾಯಕ್ಕೆ ಸೋನಿಯಾ ಮಣಿದರು.
ಸೋನಿಯಾ ಗಾಂಧಿ ಬಳಿ ಸರಕಾರಿ ಕಡತಗಳು ಸಹ ಬರುತ್ತಿದ್ದವು. ತುಂಬ ವಿಷಯಗಳಲ್ಲಿ ಕಾಂಗ್ರೆಸ್ ಮೇಲೆ ಸೋನಿಯಾ ಹಿಡಿತ ಇಂದಿರಾ ಗಾಂಧಿಯವರಿಗಿಂತ ಹೆಚ್ಚಿತ್ತು ಎಂದು ಸಿಂಗ್ ಹೇಳಿದ್ದಾರೆ.
''2004ರಲ್ಲಿ ಕಾಂಗ್ರೆಸ್ ತನ್ನ ಮಿತ್ರಪಕ್ಷಗಳೊಂದಿಗೆ ಯುಪಿಎ ಮೈತ್ರಿಕೂಟ ಸರಕಾರ ರಚಿಸುವ ಪ್ರಕ್ರಿಯೆಗಳು ತೀವ್ರಗೊಂಡಿದ್ದಾಗ ಸೋನಿಯಾ ಅವರ ವಿದೇಶಿ ಮೂಲ ಸ್ಫೋಟಗೊಂಡು ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ತಾವು ಪ್ರಧಾನಿಗೇರುವ ನಿರ್ಧಾರದಿಂದ ಹಿಂದೆ ಸರಿದಿದ್ದ ಸೋನಿಯಾ ಅಂತರಂಗದ ಕರೆಗೆ ಓಗೊಟ್ಟು ತಾನು ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದೇನೆ ಎಂದು ಹೇಳಿದ್ದರು. ಇದು ದೇಶವಾಸಿಗಳಲ್ಲಿ ಸೋನಿಯಾರವರ ಬಗ್ಗೆ ಅನುಕಂಪದ ಅಲೆಯನ್ನು ಸೃಷ್ಟಿಸಿತ್ತು ಮತ್ತು ಅದು ಅವರ ಮಹಾನ್ ತ್ಯಾಗ ಎಂದು ಬಣ್ಣಿಸಲ್ಪಟ್ಟಿತ್ತು.
ಸಿಂಗ್ ಅವರ ಅಭಿಪ್ರಾಯವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಇದು ರಾಜಕೀಯ ದುರುದ್ದೇಶದಿಂದ ಆಡುತ್ತಿರುವ ಮಾತು. ತಮ್ಮ ಪುಸ್ತಕದ ಪ್ರಚಾರಕ್ಕೆ ಅವರು ಈ ರೀತಿಯ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳಿದೆ.
ನನ್ನ ಪುಸ್ತಕ ಪ್ರಕಟಗೊಳ್ಳುವುದು ಸೋನಿಯಾ ಅವರಿಗೆ ಇಷ್ಟವಿರಲಿಲ್ಲ. ಮೇ 7ರಂದು ಸೋನಿಯಾ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಅವರು ನನ್ನನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಪುಸ್ತಕದಿಂದ ಕೆಲ ಅಂಶಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು,'' ಎಂದು ಸಿಂಗ್ ದೂರಿದ್ದಾರೆ.
'ಮೇವಿಗಾಗಿ ತೈಲ' ಹಗರಣದಲ್ಲಿ ಸಿಲುಕಿ ನಟವರ್ ಸಿಂಗ್ ಸಚಿವ ಸ್ಥಾನ ಕಳೆದುಕೊಂಡಿದ್ದರು. ಅವರ ಮಗ ಜಗತ್ ಸಿಂಗ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಡುಗಡೆಗಡೆಗೆ ಮೊದಲೇ ಸುದ್ದಿಯಲ್ಲಿರುವ ಸಿಂಗ್ ಪುಸ್ತಕ ಪ್ರಕಟಗೊಂಡ ತರುವಾಯ ಮತ್ತಷ್ಟು ಕೋಲಾಹಲವನ್ನೆಬ್ಬಿಸಲಿದೆ ಎಂದು ಹೇಳಲಾಗುತ್ತಿದೆ.