ಮುಸ್ಲಿಮರ ಕ್ಷಮೆಯಾಚಿಸದ ಮೋದಿಗೆ ಯಾಕೆ ಆಹ್ವಾನ ನೀಡಲಿ: ಶಾಹಿ ಇಮಾಮ್ ಬುಖಾರಿ ಕಿಡಿ

ಗುರುವಾರ, 30 ಅಕ್ಟೋಬರ್ 2014 (18:21 IST)
ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯಲ್ಲಿ ನಡೆದ 1 ಸಾವಿರ ಮುಸ್ಲಿಮರ ನರಮೇಧದ ಬಗ್ಗೆ ಸಮುದಾಯ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಕ್ಷಮಿಸಿಲ್ಲ. ಮುಸ್ಲಿಮರ ಕ್ಷಮೆಯಾಚಿಸದ ಮೋದಿಯವರಿಗೆ ನಾನ್ಯಾಕೆ ಆಹ್ವಾನ ನೀಡಲಿ ಎಂದು ದೆಹಲಿ ಜಾಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಬುಖಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನರೇಂದ್ರ ಮೋದಿ ಪ್ರದಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಕೂಡಾ ಮುಸ್ಲಿಮರ ಏಳಿಗೆಗಾಗಿ ಯಾವುದೇ ಕೆಲಸ ಮಾಡಿಲ್ಲ. ಸೌಜನ್ಯಕ್ಕಾದರೂ ಮುಸ್ಲಿಮರ ಕ್ಷಮೆಯಾಚಿಸಿಲ್ಲ ಎಂದು ಕಿಡಿಕಾರಿದ್ದಾರೆ.  
 
ನನ್ನ ತಂದೆಯವರ ಕಾಲದಿಂದಲೂ ಷರೀಫ್ ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವಿರುವುದರಿಂದ ಪುತ್ರನ ಉತ್ತರಾಧಿಕಾರಿತ್ವ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಆಹ್ವಾನಿಸಲಾಗಿದೆ. ಬಿಜೆಪಿಯ ಇಬ್ಬರು ನಾಯಕರಿಗೆ ಮಾತ್ರ ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 
 
ಬುಖಾರಿ ತಮ್ಮ ಪುತ್ರ ಶಬನ್ ಬುಖಾರಿಯ ಉತ್ತರಾಧಿಕಾರಿತ್ವ ಸಮಾರಂಭ ನವೆಂಬರ್ 22 ರಂದು ನಡೆಯಲಿದ್ದು, ಅತಿಥಿಗಳಿಗೆ ನವೆಂಬರ್ 29 ರಂದು ವಿಶೇಷ ಔತಣಕೂಟ ಆಯೋಜಿಸಲಾಗಿದೆ.
 
ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಗೆ ಆಹ್ವಾನ ನೀಡಲಾಗಿದೆ ಎಂದು ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ