ಶಿವಸೇನೆ ಮೈತ್ರಿ ಮುರಿದಲ್ಲಿ ಎನ್‌ಸಿಪಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ: ಅಜಿತ್ ಪವಾರ್

ಸೋಮವಾರ, 27 ಜುಲೈ 2015 (16:24 IST)
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮಧ್ಯ ನಡೆಯುತ್ತಿರುವ ವಾಗ್ವಾದದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಆದರೆ ಚುನಾವಣೆ ನಂತರ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಹೇಳಿದ್ದಾರೆ.
 
ಮಹಾರಾಷ್ಟ್ರ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿಕೆ ನೀಡಿದ ನಂತರ ಎನ್‌ಸಿಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. 
 
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿ ಪಕ್ಷಕ್ಕೆ ಬಹುಮತದ ಕೊರತೆಯಾದಾಗ ಎನ್‌ಸಿಪಿ ಪಕ್ಷ ಬಾಹ್ಯ ಬೆಂಬಲ ನೀಡಿತ್ತು. ಆ ಸಂದರ್ಭದಲ್ಲಿ ಮತ್ತೆ ಚುನಾವಣೆ ಎದುರಿಸುವುದು ನಮಗೆ ಬೇಡವಾಗಿತ್ತು. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಹೊರಗಿನಿಂದ ಬೆಂಬಲ ನೀಡಲಾಗಿತ್ತು. ಇದೀಗ ಒಂದು ವೇಳೆ ಶಿವಸೇನೆ ಬೆಂಬಲ ಹಿಂಪಡೆದಲ್ಲಿ ಬಿಜೆಪಿಗೆ ಎನ್‌ಸಿಪಿ ಬೆಂಬಲ ನೀಡುವುದಿಲ್ಲ ಎಂದರು.
 
ಒಂದು ವೇಳೆ ಶಿವಸೇನೆ ಮತ್ತು ಬಿಜೆಪಿ ಮಧ್ಯೆ ಮೈತ್ರಿ ಮುರಿದು ಸರಕಾರ ಪತನವಾದಲ್ಲಿ ಎನ್‌ಸಿಪಿ ಪಕ್ಷ ಮಧ್ಯಂತರ ಚುನಾವಣೆಗೆ ಸಿದ್ಧವಿದೆ ಎಂದು ಪವಾರ್ ತಿಳಿಸಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಂತರ ಯಾವುದೇ ಪಕ್ಷಕ್ಕೂ ಬಹುಮತ ಬರಲಿಲ್ಲ. ಆದ್ದರಿಂದ ಮತ್ತೆ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂದು ಭಾವಿಸಿದ್ದರಿಂದ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದ್ದಾರೆ. 
 
ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರಕಾರ ಜನಪರ ಕಾರ್ಯನಿರ್ವಹಿಸುವವರೆಗೆ ಶಿವಸೇನೆ ಬೆಂಬಲಿಸುತ್ತದೆ. ಒಂದು ವೇಳೆ ತಮ್ಮದೇ ಆದ ಅಜೆಂಡಾ ಮುಂದುವರಿಸಿದಲ್ಲಿ ಬಿಜೆಪಿಗೆ ನೀಡಿದ ಬೆಂಬಲವನ್ನು ಹಿಂಪಡೆಯಲಾಗುವುದು ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಎಚ್ಚರಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ