ಮತ್ತೆ ವಿವಾದದಲ್ಲಿ ಶಿಕ್ಷಣ ಸಚಿವೆ ನೀರಾ ಯಾದವ್: ಬಿಹಾರ ನಮ್ಮ ನೆರೆ ರಾಷ್ಟ್ರವಂತೆ!

ಸೋಮವಾರ, 3 ಆಗಸ್ಟ್ 2015 (12:04 IST)
ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌‌ ಕಲಾಂ ಜೀವಂತವಾಗಿದ್ದಾಗಲೇ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವುದರ ಮೂಲಕ ತೀವ್ರ ಖಂಡನೆಗೆ ಗುರಿಯಾಗಿದ್ದ ಜಾರ್ಖಂಡ್‌ ರಾಜ್ಯದ ಶಿಕ್ಷಣ ಸಚಿವೆ ನೀರಾ ಯಾದವ್‌‌, ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.  ಬಿಹಾರ ರಾಜ್ಯವನ್ನು ನೆರೆಯ ರಾಷ್ಟ್ರ ಎಂದು ಹೇಳುವ ಮೂಲಕ ಅವರು ಮತ್ತೆ ಮುಜುಗರಕ್ಕೀಡಾಗಿದ್ದಾರೆ. 

ಕೊಡಾರ್ಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನೀರಾ ಯಾದವ್‌‌‌ ಅವರ ಬಳಿ ಸದ್ಯದಲ್ಲಿಯೇ ನಡೆಯಲಿರುವ ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನಿಸಿವೆ. ಅದಕ್ಕುತ್ತರಿಸಿದ ಅವರು, "ಬಿಹಾರ ನಮ್ಮ ನೆರೆಯ ರಾಷ್ಟ್ರವಾಗಿದ್ದು, ನಮ್ಮ ರಾಜ್ಯದ ಬಿಜೆಪಿ ಕಾರ್ಯಕರ್ತರು ಬಿಹಾರ ಚುನಾವಣೆಯಲ್ಲಿ  ಪ್ರಚಾರ ಕಾರ್ಯ ನಡೆಸಲಿದ್ದಾರೆ‌‌", ಎಂದು ಹೇಳುವ ಮೂಲಕ ಸಚಿವೆ ನಮ್ಮದೇ ದೇಶದ ಭಾಗವನ್ನೇ ವಿದೇಶವನ್ನಾಗಿಸಿದ್ದಾರೆ.
 
ಇದೇ ತಿಂಗಳ 21ರಂದು ಹಜಾರಿಬಾಗ್‌‌‌ನ ಕೊಡರ್ಮ ಎಂಬಲ್ಲಿನ ಶಾಲೆಯೊಂದರಲ್ಲಿ ನೂತನ ಕೊಠಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವೆ ನೀರಾ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಅಹ್ವಾನಿಸಲಾಗಿತ್ತು. ಉದ್ಘಾಟನೆಗೆ ಮೊದಲು ಕಲಾಂ ಅವರ ಫೋಟೋಗೆ ಹಾರ ಹಾಕಿ ಕುಂಕುಮವನ್ನು ಹಾಕಿದ ಸಚಿವೆ, ಶ್ರದ್ಧಾಂಜಲಿ ಸಲ್ಲಿಸುವ ರೀತಿಯಲ್ಲಿಯೇ ಗೌರವ ಸಲ್ಲಿಸಿದ್ದರು. ದೇಶವೇ ಹೆಮ್ಮೆ ಪಡುವ ವಿಜ್ಞಾನಿ, ಮಾಜಿ ರಾಷ್ಟ್ರಪತಿಗಳಿಗೆ ಅವಮಾನವಾಗುತ್ತಿದ್ದರೂ, ಈ ಅವಾಂತರವನ್ನು ಅಲ್ಲಿದ್ದ ಯಾರು ಕೂಡ ತಡೆದಿರಲಿಲ್ಲ
 
ಆ ಸಂದರ್ಭದಲ್ಲಿ ಬಿಜೆಪಿಯ ಶಾಸಕ ಮನೀಶ್‌ ಜೈಸ್ವಾಲ್‌ ಸಹ ಹಾಜರಿದ್ದರು. ಕಲಾಂ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಸಚಿವೆಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು .ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವೃ ವಿರೋಧ ಕಂಡು ಬಂದಿತ್ತು.  ದೇಶದ ಹೆಮ್ಮೆಯ ವಿಜ್ಞಾನಿಗೆ ಅಪಮಾನ ಮಾಡಿದ ನೀರಾ ಯಾದವ್  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು.
 
ಆದರೆ ತಮ್ಮ ತಪ್ಪನ್ನು ಸಮರ್ಥಿಸಿಕೊಂಡಿದ್ದ ಸಚಿವೆ 'ನಾನು ಭಾವಚಿತ್ರದ ಹಣೆಗೆ ತಿಲಕವನ್ನಿಟ್ಟಿದ್ದೆ ಅಷ್ಟೇ. ನಾನು ಮಾಲೆ ಹಾಕಿಲ್ಲ. ಜೀವಂತ ವ್ಯಕ್ತಿಗಳಿಗೆ ತಿಲಕವನ್ನೀಡುವುದರಲ್ಲಿ ತಪ್ಪಲ್ಲ. ನಾನು ಭಾವಚಿತ್ರಕ್ಕೆ  ಮಾಲೆ ಹಾಕಿರುವುದಕ್ಕೆ ಸಾಕ್ಷಿಯಾಗಿ ಫೋಟೋ ಅಥವಾ ವೀಡಿಯೋ ತೋರಿಸಿ ನೋಡೋಣ', ಎಂದು ಸವಾಲು ಹಾಕಿದ್ದರು. 
 
ಕಾಕತಾಳೀಯವೆನ್ನುವಂತೆ  ಜುಲೈ 27ರಂದು ಕಲಾಂ ಸಾವನ್ನಪ್ಪಿದಾಗ ನೀರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕಾ ಪ್ರಹಾರ ನಡೆದಿತ್ತು. 

ವೆಬ್ದುನಿಯಾವನ್ನು ಓದಿ