ದಾದ್ರಿಯಲ್ಲ, ಬಾಬ್ರಿಯಲ್ಲ: ಗಣೇಶ ದೇವಾಲಯದೊಳಗೆ ಮಗುವನ್ನು ಹೆತ್ತ ಮುಸ್ಲಿಂ ಮಹಿಳೆ

ಸೋಮವಾರ, 5 ಅಕ್ಟೋಬರ್ 2015 (17:39 IST)
ದಾದ್ರಿ ಮತ್ತು ಬಾಬ್ರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಹಿಂದು ಮುಸ್ಲಿಮರ ಮಧ್ಯೆ ದ್ವೇಷದ ವಾತಾವರಣ ಭುಗಿಲೆದ್ದಿದ್ದರು, ಭಾರತ ಯಾವತ್ತೂ ಜಾತ್ಯಾತೀತ ರಾಷ್ಟ್ರ ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.
 
ಇಂದು ಬೆಳಿಗ್ಗೆ 4.30 ಗಂಟೆಗೆ ನೂರ್ ಎನ್ನುವ ಗರ್ಭಿಣಿ ಮಹಿಳೆ, ತನ್ನ ಪತಿ 27 ವರ್ಷ ವಯಸ್ಸಿನ ಇಲಿಯಾಜ್ ಶೇಖ್‌ನನ್ನು ಎಬ್ಬಿಸಿ ತನಗೆ ಹೊಟ್ಟೆ ನೋವು ಆರಂಭವಾಗಿದೆ ಎಂದು ಹೇಳಿದ್ದಾಳೆ. 
 
ಇಲಿಯಾಜ್ ಪತ್ನಿ ನೂರ್‌ಳನ್ನು ಕರೆದುಕೊಂಡು ಟ್ಯಾಕ್ಸಿಯಲ್ಲಿ ಸಿಯೋನ್ ಆಸ್ಪತ್ರೆಗೆ ಶೀಘ್ರವಾಗಿ ತೆರಳಲು ಬಯಸಿದ್ದ. ಆದರೆ, ವಿಜಯನಗರ ಬಡಾವಣೆಯಲ್ಲಿರುವ ಕಿರಿದಾದ ರಸ್ತೆಗಳು ಕಾರಿನ ವೇಗಕ್ಕೆ ಅಡ್ಡಿಯಾಗಿದ್ದವು. 
 
ನೂರ್ ಜಹಾನ್‌ಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದಂತೆ ಗಾಬರಿಗೊಂಡ ಟ್ಯಾಕ್ಸಿ ಚಾಲಕ, ದಂಪತಿಗಳನ್ನು ಒತ್ತಾಯಪೂರ್ವಕವಾಗಿ ಕಾರಿನಿಂದ ಕೆಳಗಿಳಿಸಿ ಹೊರಟು ಹೋಗಿದ್ದಾನೆ.  
 
ಟ್ಯಾಕ್ಸಿ ಚಾಲಕನ ವರ್ತನೆಯಿಂದ ಆತಂಕಗೊಂಡ ಇಲಿಯಾಜ್, ಪತ್ನಿ ನೂರ್‌ ಜಹಾನ್‌ಳನ್ನು ಗಣಪತಿ ದೇವಾಲಯದ ಹೊರಗಡೆ ನಿಲ್ಲಲು ಹೇಳಿ ಬೇರೆ ಟ್ಯಾಕ್ಸಿ ತರಲು ಹೋಗಿದ್ದಾನೆ. 
 
ಗಣಪತಿ ದೇವಾಲಯದೊಳಗಿದ್ದ ಮಹಿಳಾ ಭಕ್ತರು ನೂರ್‌ ಜಹಾನ್‌ಳ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ನೂರ್‌ ಜಹಾನ್‌ಳನ್ನು ದೇವಾಲಯದೊಳಗೆ ಕರೆತಂದು, ಆಕೆಯನ್ನು ಬೆಡ್‌ಶೀಟ್ ಮೇಲೆ ಮಲಗಿಸಿ ಸುತ್ತಲು ಸೀರೆಯಿಂದ ಮರೆ ಮಾಡಿದ್ದಾರೆ. ಹಿರಿಯ ಮಹಿಳೆಯರು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಹೆರಿಗೆ ಮಾಡಿಸಿ ಗಂಡು ಮಗುವಿನ ಜನನಕ್ಕೆ ಕಾರಣವಾಗಿದ್ದಾರೆ.
 
ನನಗೆ ಹೆರಿಗೆ ನೋವು ಅತಿಯಾದಾಗ ನಾನು ರಸ್ತೆಯ ಮೇಲೆ ಕುಳಿತಿದ್ದೆ. ಹತ್ತಿರದಲ್ಲಿ ದೇವಾಲಯವಿದೆ ಎಂದು ಅರಿತು ದೇವರೇ ನಮ್ಮನ್ನು ಕಷ್ಟದಿಂದ ಪಾರು ಮಾಡಲಿ ಎಂದು ನಾನು ಗಣಪತಿ ದೇವಾಲಯ ಪ್ರವೇಶಿಸಿದೆ. ಅಲ್ಲಿದ್ದ ಮಹಿಳಾ ಭಕ್ತರು ನನಗೆ ಸುಲಭವಾಗಿ ಹೆರಿಗೆಯಾಗುವಂತೆ ಮಾಡಿದರು. ನನ್ನ ಮಗುವಿಗೆ ಗಣೇಶ್ ಎಂದು ಹೆಸರಿಡುವುದಾಗಿ ನೂರ್ ಜಹಾನ್ ಸಂತಸ ವ್ಯಕ್ತಪಡಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ