ನಿತೀಶ್ ಪ್ಯಾಕೇಜ್ ಕೇಂದ್ರದ ಹಣ: ಮೋದಿ

ಬುಧವಾರ, 2 ಸೆಪ್ಟಂಬರ್ 2015 (16:21 IST)
ಬಿಹಾರ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಪ್ರಧಾನಿ ಮೋದಿ ಮತ್ತು ಬಿಹಾರ್ ಸಿಎಂ ನಿತೀಶ್ ಕುಮಾರ್ ನಡುವಿನ ವಾಕ್ಸಮರ ತಾರಕ್ಕೇರಿದೆ. ಮಂಗಳವಾರ ಪಾಟ್ನಾದಲ್ಲಿ ಪರಿವರ್ತನಾ ಮೆರವಣಿಗೆ ಕೈಗೊಂಡಿದ್ದ ಪ್ರಧಾನಿ ಮೋದಿ ನಿತೀಶ್ ಕುಮಾರ್ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದು, ನಿತೀಶ್ ರಾಜ್ಯಕ್ಕೆ ಘೋಷಿಸಿರುವ ಪ್ಯಾಕೇಜ್ ಹಣ ಕೇಂದ್ರದ್ದು ಎಂದಿದ್ದಾರೆ. 

 
ತಮ್ಮ ಮಾತುಗಳನ್ನು ಆಲಿಸಲು ನೆರೆದಿದ್ದ ಜನಸಾಗರವನ್ನು ಕಂಡು ಸಂತುಷ್ಟರಾದಂತೆ ತೋರಿದ ಮೋದಿ, 'ಜನರ ಚಿತ್ತ ಅರಿಯಲು ಇದು ಸಾಕು, ಬಿಹಾರದ ಜನರೀಗ ಪ್ರಗತಿಪರ ಬಿಹಾರಕ್ಕೆ ಮತ ನೀಡಲು ಚಿಂತಿಸಿದ್ದಾರೆ', ಎಂದು ಹೇಳಿದ್ದಾರೆ.
 
ಈ ಹಿಂದೆ ತಾವು ಅರಾದಲ್ಲಿ ನಡೆಸಿದ್ದ ಪ್ರಚಾರ ಮೆರವಣಿಗೆಯಲ್ಲಿ ತಾವು ಘೋಷಿಸಿದ್ದ 1.65 ಲಕ್ಷ ಪ್ಯಾಕೇಜ್ ಬಗ್ಗೆ ಉಲ್ಲೇಖಿಸಿದ ಮೋದಿಯವರು, ನಿತೀಶ್ ಕುಮಾರ್ ಈ ಬಗ್ಗೆ ಮೊದಲು ಅಪಹಾಸ್ಯ ಮಾಡಿದರು.  ನಂತರ ಅವರು ಸಹ ಅನಿವಾರ್ಯವಾಗಿ 2.70 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಕಳೆದ 25 ವರ್ಷಗಳಿಂದ ಜಾತಿ ರಾಜಕೀಯದಲ್ಲಿ ಮುಳುಗಿದ್ದವರು ಈಗ ಅಭಿವೃದ್ಧಿ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ. 
 
'ಆದರೆ ಜನರಿಗೆ ವಂಚನೆ ಮಾಡುವ ಅವರ ಅಭ್ಯಾಸ ಬದಲಾಗಿಲ್ಲ. ಪ್ರತಿವರ್ಷ ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆಂದು 50,000-55,000 ಕೋಟಿ ಹಣವನ್ನು ನೀಡುತ್ತದೆ. ಅದೆಲ್ಲ ಸೇರಿಸಿ 5 ವರ್ಷಗಳಲ್ಲಿ 2.5 ರಿಂದ 2.7 ಲಕ್ಷ ಕೋಟಿಯಷ್ಟಾಗುತ್ತದೆ. ಇದೇ ಹಣವನ್ನು ಅವರು ಮುಂದಿನ 5 ವರ್ಷಗಳಿಗೆ ಪ್ಯಾಕೇಜ್ ಎಂದು ಘೋಷಿಸಿದ್ದಾರೆ. ಅವರನ್ನು ಜನರನ್ನು ವಂಚಿಸಿದ್ದಾರೆ', ಎಂದು ಮೋದಿಯವರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ