ಪ್ರಧಾನಿ ಮೋದಿಯ ಯಾವ ಭರವಸೆಯೂ ಈಡೇರಿಲ್ಲ: ನಿತೀಶ್ ಕುಮಾರ್ ವಾಗ್ದಾಳಿ

ಶನಿವಾರ, 3 ಅಕ್ಟೋಬರ್ 2015 (16:28 IST)
ಕಳೆದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದ ಯಾವುದೇ ಭರವಸೆಗಳು ಈಡೇರಿಲ್ಲ. ಜನತೆಯನ್ನು ವಂಚಿಸುವುದೇ ಅವರ ಕಾಯಕವಾಗಿದೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ಆರೋಪಿಸಿದ್ದಾರೆ.
 
ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತಂದು ಪ್ರತಿಯೊಬ್ಬ ಭಾರತೀಯನ ಖಾತೆಯಲ್ಲಿ 15-20 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಮೋದಿ ನೀಡಿದ ಭರವಸೆ ಈಡೇರಿದೆಯೇ? ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ಜಾರಿಗೆ ಬಂದಿದೆಯೇ? ಎಂದು ನಿತೀಶ್ ಕುಮಾರ್ ಬಿಹಾರ್ ಮತದಾರರನ್ನು ಪ್ರಶ್ನಿಸಿದ್ದಾರೆ.   
 
ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್, ಆರೆಸ್ಸೆಸ್ ಪ್ರಸ್ತುತ ಮೀಸಲಾತಿಯನ್ನು ಅಂತ್ಯಗೊಳಿಸುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
 
ಬಿಜೆಪಿ ಮತ್ತು ಆರೆಸ್ಸೆಸ್‌ನಿಂದ ಇದೊಂದು ಅಪಾಯಕಾರಿ ನಡೆ. ಪ್ರಸ್ತುತವಿರುವ ಮೀಸಲಾತಿ ಸೂಕ್ತವಲ್ಲ. ವ್ಯವಸ್ಥೆಯನ್ನು ಬದಲಿಸಬೇಕು ಎನ್ನುವ ಷಡ್ಯಂತ್ರ ರೂಪಿಸುತ್ತಿದೆ. ಬಿಜೆಪಿ ಸರಕಾರಕ್ಕೆ ಮೀಸಲಾತಿ ರದ್ದುಗೊಳಿಸಲು ಬಿಡುವುದಿಲ್ಲ ಎಂದು ಗುಡುಗಿದರು.
 
ಬಿಹಾರ್ ರಾಜ್ಯದ ಜನತೆ ರಾಜ್ಯದ ಚುಕ್ಕಾಣಿ ಹಿಡಿಯುವವರು ಬಿಹಾರಿ ಆಗಿರಬೇಕೋ ಅಥವಾ ಬಾಹರಿ(ಹೊರಗಿನವರು) ಆಗಿರಬೇಕೋ ಎನ್ನುವ ಬಗ್ಗೆ ನಿರ್ಧರಿಸಲಿದ್ದಾರೆ. ನಾನು ಬಿಹಾರಿಯಾಗಿದ್ದೇನೆ. ಪ್ರಧಾನಿ ಮೋದಿ ಹೊರಗಿನವರಾಗಿದ್ದಾರೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ