ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬಿಹಾರ್ ರಾಜ್ಯದ ನಿರ್ಲಕ್ಷ್ಯ: ಮೋದಿ ವಿರುದ್ಧ ನಿತೀಶ್ ಕುಮಾರ್ ವಾಗ್ದಾಳಿ

ಶನಿವಾರ, 30 ಜನವರಿ 2016 (16:54 IST)
ದೇಶದ 20 ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಬಿಹಾರ್ ರಾಜ್ಯದ ಒಂದೇ ಒಂದು ನಗರವನ್ನು ಸೇರ್ಪಡೆಗೊಳಿಸದೇ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೀಕಿಸಿದ್ದಾರೆ.
 
ಬಿಹಾರ್ ರಾಜ್ಯದಲ್ಲಿ ಯಾವುದೇ ನಗರವನ್ನು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸದೇ ಕೇಂದ್ರ ಸರಕಾರ ಮಲತಾಯಿ ಧೋರಣೆ ತಳೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಬಿಹಾರ್ ಜನತೆಯ ಮೇಲೆ ಕೇಂದ್ರ ಸರಕಾರ ಸೇಡು ತೀರಿಸಿಕೊಳ್ಳುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. 
 
ಪ್ರಾದೇಶಿಕ ಸಮತೋಲನದ ಮೂಲ ವಿಚಾರವನ್ನು ನಿರ್ಲಕ್ಷಿಸಿ, ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಘೋಷಿಸಿರುವುದು ಸರಿಯಲ್ಲ. ಇದರಿಂದ ಪ್ರಾದೇಶಿಕ ಅಸಮತೋಲನ ಎದುರಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
 
ದೇಶದಲ್ಲಿ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರ ಕೇಂದ್ರ ಸರಕಾರದ್ದು.ಇದರಲ್ಲಿ ರಾಜ್ಯ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
 
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರಕಾರ, ಯಾವುದೇ ನಗರವನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ