ಪಟಿಯಾಲಾ ಹಲ್ಲೆ ಘಟನೆ ಜಂಗಲ್ ರಾಜ್ ಅಲ್ಲವೇ?: ಬಿಜೆಪಿಗೆ ನಿತೀಶ್ ಕುಮಾರ್ ಟಾಂಗ್

ಶನಿವಾರ, 27 ಫೆಬ್ರವರಿ 2016 (20:25 IST)
ಬಿಹಾರ್ ರಾಜ್ಯದಲ್ಲಿ ಜಂಗಲ್ ರಾಜ್ ಅಡಳಿತವಿದೆ ಎಂದು ಟೀಕಿಸುತ್ತಿದ್ದ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ ಬಿಹಾರ್ ಸಿಎಂ ಪಟಿಯಾಲಾ ಕೋರ್ಟ್‌ನಲ್ಲಿ ನಡೆದ ಘಟನೆಯನ್ನು ಮಂಗಲ್ ರಾಜ್ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. 
 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ವಿಚಾರಣೆಗೆ ಕರೆತರುವ ಸಂದರ್ಭದಲ್ಲಿ ದೆಹಲಿ ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ಮಾಡಲಾದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜಂಗಲ್ ರಾಜ್ ಜಂಗಲ್ ರಾಜ್ ಎಂದು ಕರೆಯುವ ಬಿಜೆಪಿ ನಾಯಕರು ಪಟಿಯಾಲಾ ಘಟನೆಯನ್ನು ಮಂಗಲ್ ರಾಜ್ ಎಂದು ಕರೆಯುತ್ತಾರಾ? ಘಟನೆಗೆ ಕೇಂದ್ರ ಸರಕಾರವನ್ನು ಹೊಣೆ ಮಾಡಬಹುದೇ ಎಂದು ಲೇವಡಿ ಮಾಡಿದ್ದಾರೆ.
 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷ ಮೈತ್ರಿ ಮಾಡಿಕೊಂಡ ಕ್ಷಣದಿಂದಲೇ ಬಿಹಾರ್‌ನಲ್ಲಿ ಮತ್ತೆ ಜಂಗಲ್ ರಾಜ್ ಅಡಳಿತ ಜಾರಿಗೆ ಬರಲಿದೆ ಎಂದು ಬಿಜೆಪಿ ನಿರಂತರವಾಗಿ ಟೀಕಿಸುತ್ತಿತ್ತು. 
 
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದಾಗ, ಲಾಲು ಅಧಿಕಾರವಧಿಯನ್ನು ಜಂಗಲ್ ರಾಜ್ ಎಂದು ಕರೆಯಲಾಗುತ್ತಿತ್ತು.
 
ಕಳೆದ ನವೆಂಬರ್ 2015ರಲ್ಲಿ ಜೆಡಿಯು ಮತ್ತು ಆರ್‌ಜೆಡಿ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷವಾದ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದವು.

ವೆಬ್ದುನಿಯಾವನ್ನು ಓದಿ