ಇದು ಸತ್ಯ! ಮೋದಿಯನ್ನು ಹೊಗಳಿದ್ದಾರೆ ನಿತೀಶ್

ಶನಿವಾರ, 25 ಏಪ್ರಿಲ್ 2015 (11:19 IST)
ಪ್ರಧಾನಿ ಮೋದಿಯವರ ಅತಿ ಪ್ರಮುಖ ರಾಜಕೀಯ ವಿರೋಧಿ ಎಂದು ಗುರುತಿಸಲ್ಪಡುವ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮೋದಿ ಅವರ ಹೊಗಳಿಗೆ ನಿಂತಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. 

ಮೋದಿಯವರನ್ನು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕಾರಣಕ್ಕೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದ ಅವರು ಅಂದಿನಿಂದ ಮೋದಿಯವ ವಿರುದ್ಧ ಕಟು ಪ್ರಹಾರ ನೀಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. 
 
ಆದರೆ ಶುಕ್ರವಾರ ಏಕಾಯೇಕಿ ಪ್ರಧಾನಿ ಮೋದಿ ಅವರನ್ನು ನಿತೀಶ್ ಬಾಯ್ತುಂಬಾ ಹೊಗಳಿದ್ದಾರೆ. ಬಿಹಾರದಲ್ಲಿ 58 ಜನರನ್ನು ಬಲಿಪಡೆದಿರುವ ಪ್ರಚಂಡ ಬಿರುಗಾಳಿ ಪ್ರಕೋಪಕ್ಕೆ ಮೋದಿ ತತ್‌ಕ್ಷಣವೇ ಸ್ಪಂದಿಸಿ, ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದು ನಿತೀಶ್ ಅವರಲ್ಲಿ ಈ ಬದಲಾವಣೆ ಕಂಡು ಬರಲು ಕಾರಣವಾಗಿದ್ದು, ಮೋದಿಯವರ ಈ ಸ್ಪಂದನೆ ಶ್ಲಾಘನೀಯ ಎಂದು ಅವರು ಹೇಳಿದ್ದಾರೆ. 
 
"ಬಿಹಾರದಲ್ಲಿ ಬಿರುಗಾಳಿ ಅವಘಡ ಸಂಭವಸಿದಾಗ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ನೀಡಿತು. ಇದು ಅತಿ ದೊಡ್ಡ ಸಂಗತಿಯಾಗಿದೆ. ಬಿರುಗಾಳಿಗೆ ತುತ್ತಾದ ಮರುದಿನ ಬೆಳಿಗ್ಗೆ ರಾಜನಾಥ್ ಸಿಂಗ್ ಮತ್ತು ಸಂಜೆ ನರೇಂದ್ರ ಮೋದಿಯವರು ಫೋನ್ ಕರೆ ಮಾಡಿದರು. ನಮ್ಮ ಸಂಕಷ್ಟದ ಕಾಲದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಪ್ರತಿಕ್ರಿಯೆ ಅತಿ ವೇಗವಾಗಿ ಬಂದಿತ್ತು. ಈ ಕಾರಣಕ್ಕೆ ಅವರಿಗೆ ಧನ್ಯವಾದಗಳು", ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. 
 
ಗೃಹ ಸಚಿವ ರಾಜನಾಥ್‌ಸಿಂಗ್‌ ಮತ್ತು ನಿತೀಶ್‌ ಕುಮಾರ್ ಜತೆಯಾಗಿ ರಾಜ್ಯದಲ್ಲಿನ ಬಿರುಗಾಳಿಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೂಡ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ