ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸರಕಾರ ಸಾಧ್ಯವಿಲ್ಲ: ಕಾಂಗ್ರೆಸ್ ರೆಬೆಲ್ ಶಾಸಕರು

ಸೋಮವಾರ, 1 ಫೆಬ್ರವರಿ 2016 (22:04 IST)
ಮುಖ್ಯಮಂತ್ರಿ ನಬಾಮ್ ಟುಕಿಯವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆಯಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದ ಸರಕಾರ ಮುಂದುವರಿಯಲಿ ಎಂದು ಬಯಸುವುದಾಗಿ ರೆಬೆಲ್ ಕಾಂಗ್ರೆಸ್ ಶಾಸಕರು ಹೇಳಿಕೆ ನೀಡಿದ್ದಾರೆ.
 
21 ಮಂದಿ ಕಾಂಗ್ರೆಸ್ ಶಾಸಕರು ತಾವು ಕಾಂಗ್ರೆಸ್‌ನಲ್ಲಿಯೇ ಮುಂದುವರಿಯಲು ಬಯಸಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯವರ ವಿರೋಧಿಯಲ್ಲ. ಸಿಎಂ ಟುಕಿ ಕಾರ್ಯನಿರ್ವಹಣೆಯ ವಿರೋಧಿಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
 
ಅರುಣಾಚಲ ಪ್ರದೇಶದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ನಾರಾಯಣ್ ಸ್ವಾಮಿ ಮೂಲ ಕಾರಣರಾಗಿದ್ದಾರೆ ಎಂದು ರೆಬೆಲ್ ಶಾಸಕರು ಕಿಡಿಕಾರಿದ್ದಾರೆ. 
 
ನಾವು ಕಾಂಗ್ರೆಸ್ ಪಕ್ಷದ ಶಾಸಕರು. ನಮಗೆ ಕಾಂಗ್ರೆಸ್ ಸರಕಾರ ಬೇಕೇ ಹೊರತು ಬಿಜೆಪಿ ಸರಕಾರವಲ್ಲ.ಹೈಕಮಾಂಡ್‌ ಕುರಿತಂತೆ ವಿರೋಧವಿಲ್ಲ. ಸಿಎಂ ಹುದ್ದೆಯಿಂದ ಟುಕಿಯವರನ್ನು ತೆಗೆದುಹಾಕಿದಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾದಂತಾಗುತ್ತವೆ. ಕಾಂಗ್ರೆಸ್ ಸರಕಾರ ಮುಂದುವರಿಯುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪಸಂಗ್ ಡೊರ್ಜಿ ತಿಳಿಸಿದ್ದಾರೆ. 
 
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಲು ರೆಬೆಲ್ ಶಾಸಕರು ಒಂದು ತಿಂಗಳಿನಿಂದ ನಿರೀಕ್ಷಿಸುತ್ತಿದ್ದಾರೆ ಎಂದರು.
 
ಒಂದು ವೇಳೆ, ಕಾಂಗ್ರೆಸ್ ಹೈಕಮಾಂಡ್ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸಿದದ್ವಾಗಿದ್ದಲ್ಲಿ ನಾವು ಅವರನ್ನು ಭೇಟಿಯಾಗುತ್ತೇವೆ. ರಾಜ್ಯದ ಉಸ್ತುವಾರಿ ಹೊತ್ತಿರುವ ನಾರಾಯಣಸ್ವಾಮಿ, ಸೋನಿಯಾ, ರಾಹುಲ್ ಭೇಟಿಗೆ ಅಡ್ಡಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರೆಬೆಲ್ ಶಾಸಕರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ