ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಕ ಕುಳಿತುಕೊಳ್ಳಲು ಯಾವ ಪಕ್ಷಕ್ಕೂ ಇಷ್ಟವಿಲ್ಲ

ಶುಕ್ರವಾರ, 25 ಜುಲೈ 2014 (12:14 IST)
ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ನೂತನವಾಗಿ ಆಯ್ಕೆಯಾದ  ಸದಸ್ಯರಿಗೆ  ಲೋಕಸಭೆಯಲ್ಲಿ ಸೀಟುಗಳನ್ನು ಅಲಾಟ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಕಾರಣವೆಂದರೆ ಕಾಂಗ್ರೆಸ್ ಪಾಳೆಯದ ಪಕ್ಕದಲ್ಲಿ ಕುಳಿತುಕೊಳ್ಳಲು ಯಾವ ಪಕ್ಷವೂ ಬಯಸುತ್ತಿಲ್ಲವೆನ್ನುವುದು. 
 
ಕಾಂಗ್ರೆಸ್ ಸದಸ್ಯರ ಜೊತೆ ಲೋಕಸಭೆಯಲ್ಲಿ ಕುಳಿತುಕೊಳ್ಳಲು ಕನಿಷ್ಠ ಐದು ರಾಜಕೀಯ ಪಕ್ಷಗಳು ನಿರಾಕರಿಸಿವೆ. ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಕಾಂಗ್ರೆಸ್ ಪಕ್ಕದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದು,ತಮ್ಮ ರಾಜಕೀಯ ನಿಲುವು ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ದೂರ ಕಾಯ್ದುಕೊಳ್ಳುವುದಾಗಿದ್ದು, ಅದು ತಾವು ಆಸೀನರಾಗುವ ರೀತಿಯಲ್ಲಿ ಬಿಂಬಿತವಾಗಬೇಕು ಎಂದು ಹೇಳಿವೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಜೊತೆ ಆಳುವ ಪಕ್ಷದ ಸಾಲಿನಲ್ಲಿ ಕುಳಿತಿತ್ತು. ಆಗ ಕಾಂಗ್ರೆಸ್ ಪಕ್ಷದಲ್ಲಿ 200ಕ್ಕೂ ಹೆಚ್ಚು ಎಂಪಿಗಳಿದ್ದರು. ಆದರೆ ಈಗ ಕಾಂಗ್ರೆಸ್ ಬಲ ಕೇವಲ 44. ಈಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಮಾನವೂ ಇಲ್ಲ. ಸ್ಪೀಕರ್‌ಗೆ ತೀರಾ ಎಡಬದಿಯಲ್ಲಿ ಮುಖ್ಯ ಪ್ರತಿಪಕ್ಷವಾಗಿ ಕುಳಿತಿರುವ ಕಾಂಗ್ರೆಸ್ ಪಕ್ಕದಲ್ಲಿ ನವೀನ್ ಪಾಟ್ನಾಯಕ್ ಬಿಜು ಜನತಾದಳಕ್ಕೆ ಆಸನಗಳನ್ನು ನಿಗದಿಮಾಡಲಾಗಿತ್ತು.

ಆದರೆ ಒಡಿಶಾದಲ್ಲಿ 20 ಸೀಟುಗಳನ್ನು ಗೆದ್ದಿರುವ ಬಿಜೆಡಿ ಅಲ್ಲಿ ಕುಳಿತುಕೊಳ್ಳಲು ನಿರಾಕರಿಸಿದೆ. ಜೆ. ಜಯಲಲಿತಾ ಅವರ ಎಐಎಡಿಎಂಕೆ 37 ಸಂಸದರು ಮತ್ತು ತೃಣಮೂಲ ಕಾಂಗ್ರೆಸ್ 34 ಸಂಸದರು ಮತ್ತು ಬಿಜೆಡಿ ಕಾಂಗ್ರೆಸ್ ಬಳಿಕ ಅಧಿಕ ಸದಸ್ಯಬಲದ ಪಕ್ಷಗಳಾಗಿವೆ. ಅರೆ ವೃತ್ತಾಕಾರದ ಆಸನ ವ್ಯವಸ್ಥೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಆಸೀನರಾಗಿದ್ದು, ಉಳಿದ ಪಕ್ಷಗಳ ಬೇಡಿಕೆ ಈಡೇರಿಸಲು ಸ್ಪೀಕರ್‌ಗೆ ಸಾಧ್ಯವಾಗುತ್ತಿಲ್ಲ. 

ವೆಬ್ದುನಿಯಾವನ್ನು ಓದಿ