ಗುಜರಾತಿನಲ್ಲಿ ಕಚ್ಚಾಟ ತಡೆಯಲು ಸಿಎಂ ಅಭ್ಯರ್ಥಿಯನ್ನು ಬಿಂಬಿಸದ ಕಾಂಗ್ರೆಸ್

ಸೋಮವಾರ, 29 ಆಗಸ್ಟ್ 2016 (18:00 IST)
ಬಿಜೆಪಿಯ ಹಿಂದುತ್ವ ಪ್ರಯೋಗಶಾಲೆ ಎಂದು ಆಗಾಗ್ಗೆ ಉಲ್ಲೇಖಿಸುವ ಗುಜರಾತಿನಲ್ಲಿ ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿ ಯಾರೂ ಸಿಕ್ಕಿಲ್ಲವೆಂದು ಕಾಣುತ್ತದೆ. ಹೀಗಾಗಿ ಶೀಲಾ ದೀಕ್ಷಿತ್ ಅವರನ್ನು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿರುವ ಕಾಂಗ್ರೆಸ್ ಪಕ್ಷ ಗುಜರಾತಿನ ವಿಷಯದಲ್ಲಿ ಮಾತ್ರ ಮೌನ ತಾಳಿದೆ.

ಗುಜರಾತ್ ಪ್ರಧಾನಮಂತ್ರಿ ಮೋದಿಯ ತವರು ರಾಜ್ಯವಾಗಿದ್ದು, ಗುಜರಾತಿನಲ್ಲಿ ರಾಜ್ಯ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ.  ಕಾಂಗ್ರೆಸ್ 1989ರಿಂದ ಗುಜರಾತಿನಲ್ಲಿ ಅಧಿಕಾರದಿಂದ ಹೊರಗಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅನೇಕ ಆಕಾಂಕ್ಷಿಗಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉಳಿದ ಆಕಾಂಕ್ಷಿಗಳಿಗೆ ಅಸಮಾಧಾನವಾಗಿ ಚುನಾವಣೆಗೆ ಸಹಕರಿಸದೇ ಇರಬಹುದು ಎಂಬ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡಿದೆ. 

ಅವರ ಪೈಕಿ ಶಂಕರ ಸಿಂಗ್ ವಘೇಲಾ ಕೂಡ ಸೇರಿದ್ದಾರೆ. ವಘೇಲಾ ಎರಡು ದಶಕಗಳ ಹಿಂದೆ ಬಿಜೆಪಿಯನ್ನು ತ್ಯಜಿಸಿ ಪ್ರಾದೇಶಿಕ ಪಕ್ಷ ರಚಿಸಿಕೊಂಡು ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರು. ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನ ಗೊಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ