ರಾಧೆಮಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ: ಮುಂಬೈ ಪೊಲೀಸ್

ಸೋಮವಾರ, 5 ಅಕ್ಟೋಬರ್ 2015 (19:02 IST)
ಸ್ವಯಂಘೋಷಿತ ದೇವಮಾನವಿ ರಾಧೆ ಮಾ ಕಾಲಾ ಜಾದು ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂದು ಪೊಲೀಸರು ಮುಂಬೈ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ಮುಂಬೈ ಪೊಲೀಸರು, ಸುಖವಿಂದರ್ ಕೌರ್ ಅಲಿಯಾಸ್ ರಾಧೆ ಮಾ ನಿವಾಸಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ, ಕಾಲಾ ಜಾದು ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. 
 
ವಕೀಲೆ ಫಾಲ್ಗುಣಿ ಬ್ರಹ್ಮಾಬಾಟ್ ರಾಧೆ ಮಾ ಅಶ್ಲೀಲ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಉತ್ತರವಾಗಿ ನ್ಯಾಯಮೂರ್ತಿ ವಿ.ಎಂ.ಕನಾಡೆ ಮತ್ತು ಶಾಲಿನಿ ಫನಸಲ್ಕರ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದ ಪೊಲೀಸರು, ದೂರುದಾರರು ಆರೋಪಿಸಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಡಾಲಿ ಬಿಂದ್ರಾ ಮತ್ತು ಬ್ರಹ್ಮಭಟ್ ದೂರಿನ ಹಿನ್ನೆಲೆಯಲ್ಲಿ ರಾಧೆ ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ರಾಧೆ ಮಾ ವಾಸಸ್ತಾನವಾದ ನಂದನವನ ಭವನದ ಮೇಲೆ ದಾಳಿ ಮಾಡಿ ಸಾಕ್ಷ್ಯಾಧಾರಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.   

ವೆಬ್ದುನಿಯಾವನ್ನು ಓದಿ