ವಿದೇಶಿ ಅನುದಾನ, ಬಂಡವಾಳದಾರರಿಂದ ಹಣ ಪಡೆದಿಲ್ಲ: ಅಣ್ಣಾ ಹಜಾರೆ ಸ್ಪಷ್ಟನೆ

ಶುಕ್ರವಾರ, 27 ಮಾರ್ಚ್ 2015 (18:02 IST)
ಇತ್ತೀಚೆಗೆ ಎನ್‌ಡಿಎ ಸರ್ಕಾರದ ಭೂಸ್ವಾಧೀನ ಮಸೂದೆ ವಿರುದ್ಧ ರಾಷ್ಟ್ರವ್ಯಾಪಿ 'ಜೈಲ್ ಭರೋ ಆಂದೋಲನ'ವನ್ನು ಘೋಷಿಸಿರುವ  ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ, ತಮ್ಮ ಸಾಮಾಜಿಕ ಹೋರಾಟಕ್ಕೆ ಬಂಡವಾಳದಾರರ ಹಣ ಮತ್ತು ವಿದೇಶಿ ನಿಧಿಯನ್ನು ಪಡೆದಿಲ್ಲ ಎಂದಿದ್ದಾರೆ. 
 
ಅಹಮದ್ ನಗರದ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ  ರಾಲೇಗಣ್ ಸಿದ್ಧಿಯಲ್ಲಿ ಮಾತನಾಡುತ್ತಿದ್ದ ಹಜಾರೆ, ವಿದೇಶಿ ಬಂಡವಾಳದಾರರಿಂದ ಹಣ ಪಡೆಯುತ್ತಿದ್ದೇನೆ ಎಂದು ಕೇಳಿಬಂದಿರುವ ಆರೋಪಗಳನ್ನು ನಾನು ತಳ್ಳಿ ಹಾಕುತ್ತೇನೆ ಎಂದಿದ್ದಾರೆ.  
 
ನಮ್ಮ ಆಂದೋಲನದಲ್ಲಿ ವಿದೇಶದಿಂದ ಪಡೆದ ಹಣವನ್ನು ಬಳಸಲಾಗುತ್ತಿದೆ ಎಂದು ಯಾರಾದರೂ ಸಾಬೀತು ಮಾಡಿದರೆ ನಾನು ಸಾಮಾಜಿಕ ಸೇವೆಯಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಅವರು ಬಹಿರಂಗವಾಗಿ ಸವಾಲೆಸೆದಿದ್ದಾರೆ. 
 
ನಿಯತಕಾಲಿಕೆಯೊಂದು ಗಾಂಧೀವಾದಿ ಅಣ್ಣಾರವರನ್ನು ವಿದೇಶಿ ಏಜಂಟ್ ಎಂದು ದೂಷಿಸಿದ್ದ ಕಾರಣಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ಮಧ್ಯಪ್ರದೇಶದಿಂದ ಪ್ರಕಟಿಸಲ್ಪಡುವ ಪತ್ರಿಕೆಯೊಂದು ಹಜಾರೆಯವರ ಸರ್ಕಾರೇತರ ಸಂಸ್ಥೆ ವಿದೇಶಿ ಹಣ ಸ್ವೀಕರಿಸುತ್ತಿದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ತಡೆ ಒಡ್ಡುತ್ತಿದೆ ಎಂದು ಆರೋಪಿಸಿತ್ತು.
 
ನಾನು ಸಾರ್ವಜನಿಕ ಸಭೆ ನಡೆಸುವಾಗಲೆಲ್ಲ, ಒಂದು ಚೀಲವನ್ನಿಟ್ಟಿರುತ್ತೇನೆ ಮತ್ತು ಅದರಲ್ಲಿ ಐದರಿಂದ 15 ರೂಪಾಯಿ ಹಣವನ್ನು ದೇಣಿಗೆ ಹಾಕುವಂತೆ ಜನರಲ್ಲಿ ಕೇಳಿಕೊಳ್ಳುತ್ತೇನೆ. ಸಂಗ್ರಹಿಸಿದ ಪ್ರತಿ ರೂಪಾಯಿಯನ್ನು ನಿರ್ದಿಷ್ಟ  ಖಾತೆಯಲ್ಲಿ ಸಂಗ್ರಹಿಸಲಾಗುವುದು,"ಎಂದು ಹಜಾರೆ ಹೇಳಿದರು.
 
ನನ್ನ ಆರ್ಥಿಕ ವ್ಯವಹಾರಗಳಲ್ಲಿ ನಾನು ಪಾರದರ್ಶಕತೆಯನ್ನು ಕಾಯ್ದುಕೊಂಡಿದ್ದೇನೆ. ನನ್ನ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವ ಪ್ರಯತ್ನ ಮಾಡುವವರು ತಮ್ಮ ಈ ಕಾರ್ಯದಲ್ಲಿ ಸಫಲತೆಯನ್ನು ಕಾಣಲಾರರು ಎಂದು 77 ವರ್ಷದ ಹಜಾರೆ ಗುಡುಗಿದ್ದಾರೆ. 
 
ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಹತ್ಯೆಗೈಯ್ದಂತೆ ತಮ್ಮನ್ನು ಕೂಡ ಹತ್ಯೆಗೈಯ್ಯುವ ಬೆದರಿಕೆ ಒಡ್ಡಿದ್ದನ್ನು ಕೂಡ ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ ಪ್ರಸ್ತಾಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ