ರೈತರ ಆತ್ಮಹತ್ಯೆಗೆ , ಭೂಸ್ವಾದೀನ ಮಸೂದೆಗೆ ಯಾವುದೇ ಸಂಬಂಧವಿಲ್ಲ: ಸಚಿವ ವೆಂಕಯ್ಯ ನಾಯ್ಡು

ಸೋಮವಾರ, 27 ಏಪ್ರಿಲ್ 2015 (16:34 IST)
ಆಪ್ ರ್ಯಾಲಿಯ ವೇಳೆ ಆತ್ಮಹತ್ಯೆಗೆ ಶರಣಾದ ರೈತ ಗಜೇಂದ್ರ ಸಿಂಗ್ ಪ್ರಕರಣಕ್ಕೂ ಕೇಂದ್ರ ಸರಕಾರದ ಭಊಸ್ವಾಧೀನ ಮಸೂದೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಪ್ರತಿಯೊಂದು ವಿಷಯವನ್ನು ವಿಪಕ್ಷಗಳು ರಾಜಕೀಯಗೊಳಿಸುವುದು ಸರಿಯಲ್ಲ. ಇಂತಹ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ರಾಜಸ್ಥಾನದ ಮೂಲದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೊಂದು ದುರದೃಷ್ಟಕರ ಘಟನೆ. ಭೂ ಸ್ವಾಧೀನ ಮಸೂದೆಗೂ ರೈತನ ಆತ್ಮಹತ್ಯಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಫಷ್ಟಪಡಿಸಿದರು.

ಕಳೆದ ಒಂದು ದಶಕದಲ್ಲಿ ಅಂದಾಜು 2ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿತ್ತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಆದ್ದರಿಂದ, ಪ್ರತಿಯೊಂದು ವಿಷಯನ್ನು ರಾಜಕೀಯಗೊಳಿಸಿ ಜನತೆಯ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಬೇಡ ಎಂದು ವಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.

ಎನ್‌ಡಿಎ ಸರಕಾರದ ಭೂ ಸ್ವಾಧೀನ ಮಸೂದೆಯ ಬಗ್ಗೆ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ, ಸತ್ಯ ಸಂಗತಿ ಎಂದರೆ ಯುಪಿಎ ಅವಧಿಯಲ್ಲಿಯೇ ರೈತರ ಹೆಚ್ಚು ಭೂಮಿಯನ್ನು ವಶಪಡಿಸಕೊಳ್ಳಲಾಗಿತ್ತು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ