ನನ್ನನ್ನು ಪಕ್ಷದಿಂದ ಕಿತ್ತೆಸೆಯುವ ತಾಕತ್ತು ಯಾರಿಗೂ ಇಲ್ಲ: ಶತ್ರುಘ್ನ ಸಿನ್ಹಾ

ಬುಧವಾರ, 18 ನವೆಂಬರ್ 2015 (16:44 IST)
ಬಿಜೆಪಿ ಹಿರಿಯ ನಾಯಕ, ನಟ ಶತ್ರುಘ್ನ ಸಿನ್ಹಾ ಮತ್ತೆ ಪಕ್ಷದ ವಿರುದ್ಧ ವಾಗ್ದಾಳಿಗೆ ನಿಂತಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ನೇರ ಪ್ರಹಾರ ನಡೆಸಿರುವ ಅವರು  'ನನ್ನನ್ನು ಪಕ್ಷದಿಂದ ಹೊರಹಾಕುವ ತಾಕತ್ತು ಅಥವಾ ಡಿಎನ್ ಎ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಬಿಹಾರ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿ-ಯು ನಾಯಕ ನಿತೀಶ್ ಕುಮಾರ್ ಅವರ ವಿರುದ್ಧ ಪ್ರಧಾನಿ ಮೋದಿಯವರು ಬಳಸಿದ್ದ ಡಿಎನ್ಎ ವಾಗ್ದಾಳಿಯನ್ನು ಸಿನ್ಹಾ ಉಲ್ಲೇಖಿಸಿರುವುದು ಅವರು ಟಾಂಗ್ ನೀಡಿರುವುದು ಮೋದಿಯವರಿಗೆ ಎಂಬುದನ್ನು ಸ್ಪಷ್ಟಪಡಿಸಿದೆ.
 
ಸೋಲಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂಬ ಹಿರಿಯ ನಾಯಕ ಒತ್ತಾಯವನ್ನು ಸಮರ್ಥಿಸಿಕೊಂಡಿರುವ ಅವರು, 'ಸಾಮೂಹಿಕ ಜವಾಬ್ದಾರಿ "ಛದ್ಮವೇಷ" ಸ್ವೀಕಾರಾರ್ಹವಲ್ಲ. ಸುಧಾರಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತಾಗಲು ವೈಯಕ್ತಿಕವಾಗಿ ಸೋಲಿನ ಹೊಣೆಗಾರಿಕೆಯನ್ನು ನಿಗದಿ ಪಡಿಸಬೇಕು. ಸೋಲಿಗೆ ಕಾರಣರಾದವರನ್ನು ಗುರುತಿಸಿ ತಲೆದಂಡ ಪಡೆಯುವುದೇ ಮುಖ್ಯ. ಸೋಲಿಗೆ ಕಾರಣರಾದವರು ಯಾಕೆ ಹೀಗಾಯಿತು ಎಂಬುದನ್ನು ಸ್ಪಷ್ಟಪಡಿಸಬೇಕು', ಎಂದು  ಆಗ್ರಹಿಸಿದ್ದಾರೆ.
 
'ಪಕ್ಷದ ವಿರುದ್ಧ ನಾನು ಬಹಿರಂಗವಾಗಿ ಇಷ್ಟೆಲ್ಲ ಟೀಕಿಸುತ್ತಿದ್ದರೂ  ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ; ಅಂತಹ ಡಿಎನ್‌ಎ ಕೂಡ ಯಾರಲ್ಲೂ ಇಲ್ಲ', ಎಂದು ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.
 
'ಮಾಜಿ ಗೃಹ ಕಾರ್ಯದರ್ಶಿ ಆರ್‌ ಕೆ ಸಿಂಗ್‌ ಮತ್ತು ಹೆಮ್ಮೆಯ ಬಿಹಾರಿ ಶೇರ್‌ (ತಾನು) ಯಾವತ್ತೂ ಸರಿಯಾದ ನಿಲುವುಗಳನ್ನು ಹೊಂದಿರುತ್ತಾರೆ.  ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ', ಎಂದು ಶತ್ರುಘ್ನ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ