ಕೇಂದ್ರ ಸಚಿವನಿಗೆ ಬುದ್ಧಿ ಕಲಿಸಿ ಕರ್ತವ್ಯನಿಷ್ಠೆ ಮೆರೆದ ಮಹಿಳಾ ಅಧಿಕಾರಿ

ಮಂಗಳವಾರ, 19 ಮೇ 2015 (15:43 IST)
ವಿಐಪಿ ಸಂಸ್ಕೃತಿಯ ವಿರುದ್ಧ ಕಠಿಣ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ, ಕೆಲವು ಸಚಿವರು, ಸಾರ್ವಜನಿಕ ವ್ಯಕ್ತಿಗಳು ತಮ್ಮ ವರ್ತನೆಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುತ್ತಿಲ್ಲ. ಅಧಿಕಾರಿಗಳು ಸಹ ದೊಡ್ಡವರೆನಿಸಿಕೊಂಡವರ ತಪ್ಪನ್ನು ನಿರ್ಲಕ್ಷಿಸುವುದು ಸಾಮಾನ್ಯ.  ಆದರೆ ನಿಯಮ ಮುರಿಯುತ್ತಿದ್ದ ಕೇಂದ್ರ ಸಚಿವರನ್ನು ತಡೆದು ಮಹಿಳಾ ಅಧಿಕಾರಿಯೊಬ್ಬರು ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ತನ್ನ ಸಹಚರರ ಜತೆಗೆ ನಿರ್ಗಮನದ ಗೇಟ್ ಮೂಲಕ ವಿಮಾನ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಾಗ ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಇನ್ಸಪೆಕ್ಟರ್ ಅವರನ್ನು ತಡೆದಿದ್ದಾರೆ. 
 
ತನ್ನನ್ನೊಬ್ಬನಾದರೂ ಒಳಗೆ ಹೋಗಲು ಬಿಡುವಂತೆ ಸಚಿವ ಅಧಿಕಾರಿಯ ಬಳಿ ವಾದಿಸುತ್ತಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರೆ ಈ ಕುರಿತು ಹಿರಿಯ ಅಧಿಕಾರಿಗಳ ಜತೆ ವಾಕಿ-ಟಾಕಿ ಮೂಲಕ ಸಂಭಾಷಣೆ ನಡೆಸಿದ ಮಹಿಳಾ ಅಧಿಕಾರಿ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. 
 
ಈ ಕುರಿತು ವರದಿಗಾರರ ಜತೆ ಮಾತನಾಡಿದ ಅಧಿಕಾರಿ, ಸಚಿವರ ಮನವಿಯನ್ನು ಪರಿಗಣಿಸಿದ್ದರೆ ನಾನು ಅಮಾನತುಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ. 
 
ಮತ್ತೊಬ್ಬ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಬರಮಾಡಿಕೊಳ್ಳಲು ಯಾದವ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ವೆಬ್ದುನಿಯಾವನ್ನು ಓದಿ