ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸದಿರುವುದೇ ಕಾಂಗ್ರೆಸ್ ತಂತ್ರ: ಜೈರಾಮ್

ಬುಧವಾರ, 30 ಏಪ್ರಿಲ್ 2014 (15:25 IST)
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನರೇಂದ್ರ ಮೋದಿಯವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ 
 
ಘೋಷಿಸಿ ವ್ಯಕ್ತಿ ಆಧಾರಿತ ಚುನಾವಣೆ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ರಾಹುಲ್ ಗಾಂಧಿಯವರ 
 
ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಪ್ರಸ್ತಾಪಿಸದಿರುವುದು ಚುನಾವಣೆ ರಣತಂತ್ರವಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ. 
 
ದೇಶದಲ್ಲಿ ರಾಜಕೀಯ ಪಕ್ಷಗಳ ವ್ಯವಸ್ಥೆಯಿರುವುದರಿಂದ  ಚುನಾವಣೆಗಳು ವೈಯಕ್ತಿಕ ಸಂಘರ್ಷಕ್ಕೆ ಪೂರಕವಲ್ಲ ಎಂದು 
 
ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. 

 
ಒಂದು ವೇಳೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯನ್ನು ಘೋಷಿಸಿದ್ದರೆ ಪಕ್ಷದ ಮೇಲೆ ಪರಿಣಾಮ 
 
ಬೀರಬಹುದಾಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ 
 
ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದು ಬೇಡ ಎನ್ನುವುದು ಪಕ್ಷದ ತೀರ್ಮಾನವಾಗಿತ್ತು. ಬಿಜೆಪಿಯಂತೆ 
 
ಕಾಂಗ್ರೆಸ್ ಪಕ್ಷದ ಪ್ರಚಾರ ಒಬ್ಬ ವ್ಯಕ್ತಿಯ ಪರವಾಗಿಲ್ಲ ಎಂದು ತಿರುಗೇಟು ನೀಡಿದರು. 
 
 
ದೇಶದಲ್ಲಿ ಮೋದಿಯ ಬಗ್ಗೆ ಹೆಚ್ಚಿನ ಪ್ರಚಾರವಾಗುತ್ತಿದೆಯೇ ಹೊರತು ಬಿಜೆಪಿ ಪಕ್ಷದ ಪರವಾಗಿ ಪ್ರಚಾರವಾಗುತ್ತಿಲ್ಲ. ಬಿಜೆಪಿ 
 
ಪಕ್ಷದವರಿಗೆ ಕೇವಲ ಒಂದೇ ಒಂದು ಉದ್ದೇಶವಿದೆ ಎಂದು ಲೇವಡಿ ಮಾಡಿದರು.
 
 
ಸಂಸದೀಯ ವ್ಯವಸ್ಥೆಯ ಸರಕಾರದಲ್ಲಿ ಚುನಾವಣೆಗಳು ರಾಜಕೀಯ ಪಕ್ಷಗಳ ಇತಿಹಾಸ, ಸಿದ್ದಾಂತ, ಕಾರ್ಯಕ್ರಮಗಳ 
 
ಮೇಲೆ ನಡೆಯುತ್ತವೆ ಎನ್ನುವುದು ನನ್ನ ಭಾವನೆ ಎಂದರು.
 
 
ಕಾಂಗ್ರೆಸ್ ಪಕ್ಷದಲ್ಲಿ ದೈತ್ಯ ನಾಯಕರಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಕೂಡಾ ಪಕ್ಷವನ್ನು ಬೆಳೆಸಲು 
 
ಪ್ರಯತ್ನಿಸಿದರೇ ಹೊರತು ವ್ಯಯಕ್ತಿಕವಾಗಿ ಬೆಳೆಯಲು ಬಯಸಲಿಲ್ಲ. ಪಕ್ಷವನ್ನು ಸದೃಝಗೊಳಿಸುವುದು ನಮ್ಮ 
 
ಉದ್ದೇಶವಾಗಿದೆ. ವ್ಯಕ್ತಿಯನ್ನು ಬೆಳೆಸುವುದಲ್ಲ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ