ಮೋದಿ ಮತ್ತು ಸೂಟ್ ಧರಿಸಿರುವ ಅವರ ಸ್ನೇಹಿತರ ಭಯವಿಲ್ಲ: ರಾಹುಲ್ ಗಾಂಧಿ

ಬುಧವಾರ, 27 ಮೇ 2015 (17:33 IST)
ರಾಹುಲ್ ಅವರು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುವಾಗ ಸಾಮಾನ್ಯವಾಗಿ ಸೂಟ್- ಬೂಟ್ ಎಂಬ ಪದಪ್ರಯೋಗ ಮಾಡದಿರುವುದಿಲ್ಲ. ಕೇರಳಕ್ಕೆ ಎರಡು ದಿನಗಳ ಭೇಟಿ ನೀಡಿರುವ ಅವರು ಅದೇ ಪದಗಳನ್ನಿಟ್ಟುಕೊಂಡು ಮೋದಿ ಮತ್ತು ಅವರ ನೇತೃತ್ವದ ಸರಕಾರದ ಮೇಲೆ ಹರಿಹಾಯ್ದಿದ್ದಾರೆ. "ನಮಗೆ ನರೇಂದ್ರ ಮೋದಿ ಮತ್ತು ಸೂಟ್ ಧರಿಸಿರುವ ಅವರ ಗೆಳೆಯರ ಭಯವಿಲ್ಲ", ಎಂದು ಅವರು ಸಾರಿದ್ದಾರೆ. 

ಮೀನುಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, "ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೂಟ್ ಬೂಟ್ ಸರ್ಕಾರಕ್ಕೆ ಜನ್ಮದಿನದ ಶುಭಾಶಯಗಳು ಎಂದ ಅವರು ಮಂಗಳವಾರ ಕೇವಲ ಸೂಟ್-ಬೂಟ್ ಧರಿಸಿದ ವ್ಯಕ್ತಿಗಳಷ್ಟೇ ಜನ್ಮದಿನದ ಪಾರ್ಟಿಯಲ್ಲಿ ಪಾಲ್ಗೊಂಡರು", ಎಂದು  ವ್ಯಂಗ್ಯವಾಡಿದ್ದಾರೆ. 
 
"ಮೋದಿಯವರ ಅಭಿವೃದ್ಧಿ ಯೋಜನೆಗಳು ಬಡವರ ವಿರೋಧಿ, ರೈತ ವಿರೋಧಿ ಆದರೆ ಉದ್ದಿಮೆದಾರರ ಪರ", ಎಂದು ರಾಹುಲ್ ಆರೋಪಿಸಿದ್ದಾರೆ.
 
ಕೋಝಿಕೊಡೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು ಒಬಾಮಾ ಭಾರತ ಭೇಟಿಯ ಸಂದರ್ಭದಲ್ಲಿ ( 5 ತಿಂಗಳ ಹಿಂದೆ) ಎದ್ದಿದ್ದ ಮೋದಿ ಸೂಟ್ ವಿವಾದವನ್ನು ಪ್ರಸ್ತಾಪಿಸಿದರು.
 
ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ವಾಗ್ದಾಳಿ ನಡೆಸಿದ ಅವರು, "ಎನ್‌ಡಿಎ ರೈತರಿಗೆ ರಕ್ಷಣೆ ನೀಡುವ ಕಾನೂನನ್ನು ನಾಶ ಮಾಡಲು ಬಯಸುತ್ತಿದೆ. ಭಾರತದಲ್ಲಿ ಭೂಮಿ ಚಿನ್ನದ ಮೌಲ್ಯವನ್ನು ಪಡೆದುಕೊಂಡಿದೆ. ಅವರು ಈ ಚಿನ್ನವನ್ನು ತಮ್ಮ ಸ್ನೇಹಿತರಿಗೆ ನೀಡಲು ಹವಣಿಸುತ್ತಿದ್ದಾರೆ," ಎಂದು ಕಿಚಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ