ಹಾಜಿ ಅಲಿ ದರ್ಗಾದೊಳಗೆ ಪ್ರವೇಶಿಸಲು ಅನುಮತಿ ಕೊಡಿ: ಮುಸ್ಲಿಂ ಮಹಿಳಾ ಸಂಘಟನೆಗಳ ಒತ್ತಾಯ

ಗುರುವಾರ, 28 ಜನವರಿ 2016 (17:43 IST)
ಮಹಾರಾಷ್ಟ್ರದ ಶನಿ ಶಿಂಗ್ಣಾಪುರ್‌ ದೇವಸ್ಥಾನದೊಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಭಾರಿ ಪ್ರತಿಭಟನೆಗಳು ವ್ಯಕ್ತವಾಗಿರುವ ಮಧ್ಯೆಯೇ, ಮುಂಬೈನಲ್ಲಿರುವ ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಮುಸ್ಲಿಂ ಮಹಿಳಾ ಗುಂಪುಗಳು ಒತ್ತಾಯಿಸಿವೆ. 
 
ಹಾಜಿ ಅಲಿ ದರ್ಗಾದೊಳಗೆ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ ನೀಡುವಂತೆ ಒತ್ತಾಯಿಸಿ, ಹಲವು ಮುಸ್ಲಿಂ ಮಹಿಳೆಯರ ಸಂಘಟನೆಗಳು ಪ್ರತಿಭಟನೆಗಿಳಿದಿವೆ.  
 
ಇದಕ್ಕಿಂತ ಮೊದಲು, ಕೇರಳದಲ್ಲಿರುವ ಶಬರಿ ಮಲೈ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅದರ ತೀರ್ಪು ಬಂದ ನಂತರ ಹಾಜಿ ಅಲಿ ದರ್ಗಾ ಕುರಿತಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಮುಂಬೈ ಹೈಕೋರ್ಟ್ ತಿಳಿಸಿದೆ.
        
ಹಾಜಿ ಅಲಿ ದರ್ಗಾಗೆ ಪುರುಷರು ಮಾತ್ರ ಪ್ರವೇಶಿಸತಕ್ಕದ್ದು. ಮಹಿಳೆಯರು ಪ್ರವೇಶಿಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ದರ್ಗಾದ ಟ್ರಸ್ಟಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
 
ಕಳೆದ ಜನೆವರಿ 26 ರಂದು ನೂರಾರು ಸಂಖ್ಯೆಯಲ್ಲಿರುವ ಮಹಿಳೆಯರು ಶನಿ ಶಿಂಗ್ಣಾಪುರ್ ದೇವಾಲಯದೊಳಗೆ ಪ್ರವೇಶಿಸಲು ತೆರಳುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಸೂಪಾ ಗ್ರಾಮದಲ್ಲಿ ಭದ್ರತಾ ಪಡೆಗಳು ತಡೆದಿದ್ದಾಗ ಉದ್ರಿಕ್ತ ವಾತಾವರಣ ಉಂಟಾಗಿತ್ತು. 
 

ವೆಬ್ದುನಿಯಾವನ್ನು ಓದಿ