ವಾಟ್ಸಪ್ ಮೂಲಕ ವಿಚ್ಛೇದನ ನೀಡಿದ ಭೂಪ!

ಬುಧವಾರ, 7 ಅಕ್ಟೋಬರ್ 2015 (13:42 IST)
ವಿವಾಹವಾದ ನಾಲ್ಕು ವಾರಗಳಲ್ಲಿ ಪತಿ ಮಹಾಶಯನೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಅದೂ ವಾಟ್ಸಪ್ ಮೂಲಕ ಎಂದರೆ ನಂಬುತ್ತೀರಾ? 

ಇದು ನಡೆದಿರುವುದು ನೆರೆಯ ಕೇರಳದಲ್ಲಿ. ಆಲಪುಳ ಎಂಬಲ್ಲಿ ಈ ಘಟನೆ ನಡೆದಿದ್ದು ಕಳೆದ 4 ವಾರಗಳ ಹಿಂದೆ ವಿವಾಹವಾಗಿದ್ದ 27 ವರ್ಷದ ಆರೋಪಿ 10 ದಿನಗಳ ಬಳಿಕ ದುಬಾಯಿಗೆ ಹಿಂತಿರುಗಿದ್ದ. 3 ವಾರಗಳ ಬಳಿಕ ಆತ ಪತ್ನಿಗೆ ತಲಾಖ್ ಸಂದೇಶ ಕಳುಹಿಸಿದ್ದಾನೆ. 
 
ಆಘಾತಕಾರಿ ಸಂದೇಶವನ್ನು ನೋಡಿದ ಕೂಡಲೇ ವಂಚನೆಗೊಳಗಾದ ಯುವತಿ ಕೊಟ್ಟಾಯಂನಲ್ಲಿರುವ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾಳೆ. ದೂರನ್ನು ಸ್ವೀಕರಿಸಿರುವ ಆಯೋಗ 'ವಾಟ್ಸಪ್ ಮೂಲಕ ಡೈವೋರ್ಸ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ನೀವು ತಾಯ್ನಾಡಿಗೆ ಆಗಮಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ' ಎಂದು ಆರೋಪಿ ಪತಿಗೆ ಸೂಚಿಸಿದೆ.  
 
'ಹೆಣ್ಣು ಸೇಬು ಹಣ್ಣು ಇದ್ದಂತೆ. ರುಚಿ ನೋಡಿ ಆಗಿದೆ. ಇನ್ನು ನನಗದರ ಅಗತ್ಯವಿಲ್ಲ', ಎಂದು ಸಂದೇಶ ಕಳುಹಿಸಿ ಕೀಳು ಮನಸ್ಥಿತಿಯನ್ನಾತ ತೋರ್ಪಡಿಸಿದ್ದಾನೆ. 
 
ವರನಿಗೆ 10 ಲಕ್ಷ ಹಣ, 80 ಸವರನ್ ಚಿನ್ನ ವರದಕ್ಷಿಣೆಯಾಗಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
 
ದಂತ ವೈದ್ಯ ಶಿಕ್ಷಣವನ್ನು ಅಭ್ಯಸಿಸುತ್ತಿರುವ ನವವಿವಾಹಿತೆ ತಲಾಖ್‌ನಿಂದಾಗಿ ಆಘಾತಕ್ಕೊಳಗಾಗಿದ್ದು ಮತ್ತೆ ತವರು ಸೇರಿದ್ದಾಳೆ. ಆಕೆಯ ದಂತ ವೈದ್ಯಕೀಯ ಶಿಕ್ಷಣವೂ ಮೊಟಕುಗೊಂಡಿದೆ.  
 
ಈ ವಾಟ್ಸಪ್ ತಲಾಖ್ ಈಗ ಮುಸ್ಲಿಂ ವಿದ್ವಾಂಸರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. 

ವೆಬ್ದುನಿಯಾವನ್ನು ಓದಿ