ವಾಟ್ಸಪ್‌ ಮೂಲಕ ಪತ್ನಿಗೆ ತಲಾಕ್ ಸಂದೇಶ ರವಾನಿಸಿದ ಅನಿವಾಸಿ ಭಾರತೀಯ

ಶನಿವಾರ, 10 ಅಕ್ಟೋಬರ್ 2015 (15:30 IST)
ವಿವಾಹವಾಗಿ ಕೇವಲ 10 ದಿನದ ನಂತರ ದುಬೈನಲ್ಲಿ ನೆಲಸಿರುವ ಅನಿವಾಸಿ ಭಾರತೀಯನೊಬ್ಬ ತನ್ನ 21 ವರ್ಷ ವಯಸ್ಸಿನ ಪತ್ನಿಗೆ ಮೂರು ಬಾರಿ ವಾಟ್ಸಪ್‌ನಲ್ಲಿ ತಲಾಖ್ ಸಂದೇಶ ರವಾನಿಸಿದ್ದಾನೆ.
 
ಕೇರಳದ ಅಲಪ್ಪುಝಾ ಜಿಲ್ಲೆಯ ಚೆರ್ತಾಲಾ ನಿವಾಸಿಯಾದ ಬಿಡಿಎಸ್ ವಿದ್ಯಾರ್ಥಿನಿಯಾದ ಮಹಿಳೆ, ಇದೀಗ ಕೇರಳ ಮಹಿಳಾ ಆಯೋಗದ ಮೊರೆಹೋಗಿದ್ದಾರೆ.
 
ಬೆರ್ ದುಬೈಗೆ ತಲುಪಿದ ಬಗ್ಗೆಯೂ ಪತಿ ನನಗೆ ಮಾಹಿತಿ ನೀಡಿಲ್ಲ. ಹಲವಾರು ಬಾರಿ ಮ್ಯಾಸೇಜ್‌ಗಳನ್ನು ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಆಘಾತಕಾರಿ ಸಂದೇಶ ರವಾನಿಸಿದ್ದಾರೆ ಎಂದು ಪತ್ನಿ, ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ನನಗೆ ಯಾಕೆ ಫೋನ್ ಕರೆ ಮಾಡುತ್ತೀಯಾ? ನಾನು ನಿನ್ನನ್ನು ಇಷ್ಟಪಡುವುದಿಲ್ಲ. ನನಗಾಗಿ ಕಾಯಬೇಡ. ಒಂದು ವೇಳೆ ನಮಗೆ ಸೇಬು ಇಷ್ಟವಾದಲ್ಲಿ ಪ್ರತಿದಿನ ತಿನ್ನಲು ಸಾಧ್ಯವಾಗುತ್ತದೆಯೇ? ಬೇರೆ ಹಣ್ಣುಗಳನ್ನು ಕೂಡಾ ತಿನ್ನಲು ಇಷ್ಟಪಡುವದಿಲ್ಲವೇ.. ತಲಾಕ್ ತಲಾಕ್ ತಲಾಕ್ ಎನ್ನುವ ಅಂತಿಮ ಸಂದೇಶವನ್ನು ಪತಿ ಮಹಾಶಯ ರವಾನಿಸಿದ್ದಾನೆ ಎಂದು ಮಹಿಳಾ ಆಯೋಗದ ಸದಸ್ಯ ಜೆ.ಪ್ರಮೀಳಾ ದೇವಿ ಮಾಹಿತಿ ನೀಡಿದ್ದಾರೆ. 
 
ವಾಟ್ಸಪ್ ಮೂಲಕ ವಿಚ್ಚೇದನ ನೀಡಿದ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ದೂರಿನಲ್ಲಿ ಒತ್ತಾಯಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.  
 
ಮಹಿಳೆಯ ತಾಯಿ, ವರನಿಗೆ ವಿವಾಹದ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ನಗದು ಮತ್ತು 79 ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿದ್ದರು. ವಿವಾಹವಾಗಿ 10 ದಿನದ ನಂತರ ಆರೋಪಿ ಪತಿ ದುಬೈಗೆ ತೆರಳಿ ನಂತರ ಪತ್ನಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದನು ಎಂದು ತಿಳಿಸಿದ್ದಾಳೆ.
 
ಮಹಿಳಾ ಆಯೋಗ, ಪತಿಯ ಪೋಷಕರಿಗೆ ನೋಟಿಸ್ ರವಾನಿಸಿದ್ದು, ಆಯೋಗದ ಮುಂದೆ ಹಾಜರಾಗುವಂತೆ ಆದೇಶ ನೀಡಿದೆ. 
 
ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌‌ಬುಕ್‌ ಮತ್ತು ವಾಟ್ಸಪ್‌ ಮೂಲಕ ತಲಾಕ್ ನೀಡುವುದು ಮಾನವೀಯತೆಗೆ ವಿರೋಧವಾಗಿದೆ ಎಂದು ಕೇರಳ ನಡುವದಲ್ ಮುಜಾಹಿದಿನ್ ಸ್ಟೇಟ್ ಸಂಘಟನೆಯ ಅಧ್ಯಕ್ಷ ಟಿ.ಪಿ.ಅಬ್ದುಲ್ಲಾ ಮಾಜಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ