ಬರಾಕ್ ಒಬಾಮಾರನ್ನು ಕಾಡಿದ ನರೇಂದ್ರ ಮೋದಿ ವೈಯಕ್ತಿಕ ಗೆಳೆತನ

ಮಂಗಳವಾರ, 19 ಮೇ 2015 (16:42 IST)
ಅಮೇರಿಕಾದಲ್ಲಿ ಭಾರತದ ನೂತನ ರಾಯಭಾರಿಯಾಗಿ ನಿಯುಕ್ತಿಗೊಂಡ ಅರುಣ್ ಸಿಂಗ್ ಅವರೊಂದಿಗೆ ನಡೆದ ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಭಾರತ ಪ್ರವಾಸದ ದಿನಗಳನ್ನು ಮತ್ತು ಪ್ರಧಾನಿ ಮೋದಿಯವರ ಜತೆ ತಮ್ಮ ವೈಯಕ್ತಿಕ ಗೆಳೆತನವನ್ನು ಮೆಲುಕು ಹಾಕಿದರು.

ಭಾರತದ ಹೊಸ ನಿಯೋಗಿಯಾಗಿ ನೇಮಕಗೊಂಡಿರುವ ಅರುಣ್ ಸಿಂಗ್, ರಾಷ್ಟ್ರಪತಿಗಳ ಓವಲ್ ಕಚೇರಿಯಲ್ಲಿ ಬರಾಕ್ ಒಬಾಮಾರನ್ನು ಭೇಟಿ ಮಾಡಿ ಅಮೇರಿಕಾದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಂಡ ದಾಖಲೆಗಳ ದೃಢೀಕರಣವನ್ನು ಪ್ರಸ್ತುತಪಡಿಸಿದರು.
 
ರಾಯಭಾರಿ ಸಿಂಗ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದ ಒಬಾಮಾ, ಮುಂದಿನ ರಾಯಭಾರಿಯಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಅವರು ಯಶಸ್ಸನ್ನು ಪಡೆಯಲಿ ಎಂದು ಹಾರೈಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ. 
 
ಜನವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದುದನ್ನು ನೆನಪಿಸಿಕೊಂಡ ಒಬಾಮಾ, ಮೋದಿ ಜತೆಗಿನ ತಮ್ಮ ಖಾಸಗಿ ಗೆಳೆತನದ ಬಗ್ಗೆ ಕೂಡ ಮಾತನಾಡಿದರು ಎಂದು ತಿಳಿದು ಬಂದಿದೆ. 
 
ಅದಕ್ಕೆ ಪ್ರತಿಯಾಗಿ ಸಿಂಗ್ ಕೂಡ ರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿಯವರ ಕಡೆಯಿಂದ ಒಬಾಮಾ ಮತ್ತು ಅವರ ಪತ್ನಿಗೆ ಶುಭ ಹಾರೈಕೆಗಳನ್ನು ತಲುಪಿಸಿದ್ದಾರೆ. 
 
ಹೊಸ ಜವಾಬ್ದಾರಿಯನ್ನು ವಹಿಸಿಕೊಂಡು ಮಾತನಾಡಿದ ಸಿಂಗ್, "ಎರಡು ದೇಶಗಳ ನಾಯಕರು ಸೆಪ್ಟೆಂಬರ್ 2014 ಮತ್ತು ಜನವರಿ 2015 ರಲ್ಲಿ ನಡೆದ ಶೃಂಗಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಜಾಗತಿಕ ದೃಷ್ಟಿಕೋನವನ್ನೊಳಗೊಂಡ ಭಾರತ-ಅಮೆರಿಕ ಆಯಕಟ್ಟಿನ ಪಾಲುದಾರಿಕೆ,  ವಿಷಯ ಯುದ್ಧನೀತಿ ಮತ್ತು ಭಾರತದ ಅಭಿವೃದ್ಧಿಗೆ ಪರಿವರ್ತನೆ ತರುವ ಕೆಲಸಗಳಿಗೆ ತಾವು ಬದ್ಧರಾಗಿರುತ್ತೇವೆ", ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ