ಫೇಸ್‌ಬುಕ್‌ನಲ್ಲಿ ತನ್ನ ಅಶ್ಲೀಲ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಶುಕ್ರವಾರ, 17 ಏಪ್ರಿಲ್ 2015 (16:02 IST)
ಸಾಮಾಜಿಕ ಜಾಲತಾಣಗಳಲ್ಲಿ  ತನ್ನ ಅಶ್ಲೀಲ ಚಿತ್ರಗಳು ಹರಿದಾಡುತ್ತಿರುವುದನ್ನು ನೋಡಿ ಆಘಾತಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಓರಿಸ್ಸಾದ ಕಟಕ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. 
 
15 ವರ್ಷದ ಬಾಲಕಿ ತನ್ನ ಮನೆ ಹಿಂದುಗಡೆ ಸ್ನಾನ ಮಾಡುತ್ತಿದ್ದಾಗ ರಹಸ್ಯವಾಗಿ ಕೆಲವು ಭಾವಚಿತ್ರಗಳನ್ನು ಕ್ಲಿಕ್ಕಿಸಿದ್ದ ಯುವಕ, ಅದನ್ನು ಬಾಲಕಿಗೆ ತೋರಿಸಿ ಎಲ್ಲರೆದುರು ಬಹಿರಂಗ ಪಡಿಸುವುದಾಗಿ  ಬೆದರಿಕೆ ಒಡ್ಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ. ಆ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದಲ್ಲದೇ ಅದನ್ನು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ. 
 
ಇದು ಬಾಲಕಿಯ ತಂದೆಯ ಗಮನಕ್ಕೆ ಬಂದಿದ್ದು, ಆತ ಗ್ರಾಮದ ಹಿರಿಯರ ಮುಂದೆ ಈ ವಿಷಯವನ್ನು ಇತ್ಯರ್ಥಗೊಳಿಸುವಂತೆ ಕೇಳಿಕೊಂಡ. ಪಂಚಾಯಿತಿ ನಡೆಸಿದ ಗ್ರಾಮದ ಮುಖಂಡರು ಬಾಲಕಿಯನ್ನು ವಿವಾಹವಾಗುವಂತೆ 18 ವರ್ಷದ ಯುವಕನಿಗೆ ಸೂಚಿಸಿದೆ. ಆದರೆ ಆತ ಅದಕ್ಕೊಪ್ಪಲಿಲ್ಲ.  
 
ಹೀಗಾಗಿ ಅವಮಾನ ತಾಳಲಾರದೇ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಯುವಕ ಪರಾರಿಯಾಗಿದ್ದಾನೆ. 
 
ಬಾಲಕಿಯ ತಂದೆ ನೀಡಿರುವ ದೂರಿನ ಮೇರೆಗೆ ಅಸಹಜ ಸಾವು ಎಂದು ದೂರು ದಾಖಲಿಸಿರುವ ಪೊಲೀಸರು ನಾಪತ್ತೆಯಾಗಿರುವ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. 
 
ಬಾಲಕಿ ಇತ್ತೀಚಿಗೆ 10 ನೇ ತರಗತಿ ಪರೀಕ್ಷೆ ಬರೆದಿದ್ದಳು. ಯುವಕ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. 

ವೆಬ್ದುನಿಯಾವನ್ನು ಓದಿ