ಶ್ರೀನಗರ್ : ಮೋದಿಯ ಮೋಡಿಗೊಳಗಾದ ಮುಖ್ಯಮಂತ್ರಿ

ಗುರುವಾರ, 27 ನವೆಂಬರ್ 2014 (12:50 IST)
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಧಾನ ಮಂತ್ರಿ ನರೇಂದ್ರ ವೋದಿಯವರ ವಿದೇಶಾಂಗ ನೀತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಒಮರ್, ವಿದೇಶಗಳೊಂದಿಗೆ ಸಂಬಂಧವನ್ನು ಬೆಳೆಸುವ, ಉತ್ತಮ ಪಡಿಸುವ ಮತ್ತು ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮೋದಿ ನಡೆ ಪ್ರಭಾವಶಾಲಿಯಾಗಿದೆ ಎಂದು ಹೇಳಿದ್ದಾರೆ.
 
ತಕ್ಷಣಕ್ಕೆ ಸಂಬಂಧವನ್ನು ಗಟ್ಟಿಗೊಳಿಸುವುದು ಅತ್ಯವಶ್ಯ ಎನಿಸಿದ್ದ ದೇಶಗಳ ಜತೆ ಈ ನಿಟ್ಟಿನಲ್ಲಿ ಸಫಲತೆಯನ್ನು ಸಾಧಿಸುವಲ್ಲಿ ಮೋದಿ ಉತ್ತಮ ಪ್ರಯತ್ನ ಮಾಡಿದ್ದಾರೆ ಎಂಬುದು ಅವರ ಮಾತಿನ ಮರ್ಮವಾಗಿತ್ತು.
 
ಗಣರಾಜ್ಯೋತ್ಸವದ ದಿನ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರವರನ್ನು ಅತಿಥಿಗಳಾಗಿ ಆಮಂತ್ರಿಸುವಲ್ಲಿ ಯಶಸ್ವಿಯಾಗಿರುವುದು ಮೋದಿ ಅನುಸರಿಸಿದ ಅತಿ ಮಹತ್ವದ ರಾಜತಾಂತ್ರಿಕ ನಡೆ ಎಂದು ಅವರು ಒತ್ತಿ ಹೇಳಿದ್ದಾರೆ.
 
ಆದಾಗ್ಯೂ,  ಚುನಾವಣಾ ಸಮಯದಲ್ಲಿ ನೀಡಿದ್ದ ಅನೇಕ ಭರವಸೆಗಳನ್ನು ಈಡೇರಿಸುವುದು ಸಹ ಅತ್ಯವಶ್ಯ ಎಂದು ಒಮರ್ ನೆನಪಿಸಿದ್ದಾರೆ.
 
ಒಮರ್‌ರವರ ಈ ಹೇಳಿಕೆ ಪಿಡಿಪಿ ಮುಖ್ಯಸ್ಥ ಮೆಹಬೂಬಾರವರನ್ನು ಕೆರಳಿಸಿದೆ.ನ್ಯಾಷನಲ್ ಕಾನ್ಫರೆನ್ಸ್ ನಾಯಕನ ಮೇಲೆ ಹರಿಹಾಯ್ದಿರುವ ಅವರು ಕಣಿವೆ ರಾಜ್ಯದಲ್ಲಿ ಅಧಿಕಾರಕ್ಕೆ ಅಂಟಿಕೊಂಡಿರಲು ಒಮರ್ ಯಾವುದೇ ಪಕ್ಷದ ಜತೆ ಕೈ ಜೋಡಿಸಲು ತಯಾರಿದ್ದಾರೆ ಎಂದು ಆರೋಪಿಸಿದ್ದಾರೆ.
 
ಜಮ್ಮು ಕಾಶ್ಮೀರದ ಹಾಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎರಡು ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬದ್ಗಾಮ್ ಜಿಲ್ಲೆಯ ಬೀರ್ವಾ ಮತ್ತು ಶ್ರೀನಗರ್ ಜಿಲ್ಲೆಯ ಸೋನ್ವಾರ್‌ನಿಂದ ಅವರು ಕಣಕ್ಕಿಳಿದಿದ್ದಾರೆ. 

ವೆಬ್ದುನಿಯಾವನ್ನು ಓದಿ