ಜೀವನ ನಿರ್ವಹಣೆಗೆ ಗಾಳಿಪಟ ತಯಾರಿಸುತ್ತಿರುವ ಯುಪಿಯ ಮೇರಿ ಕೊಮ್

ಶುಕ್ರವಾರ, 4 ಸೆಪ್ಟಂಬರ್ 2015 (12:50 IST)
ನಮ್ಮ ದೇಶದಲ್ಲಿ ಕ್ರಿಕೆಟ್ ಒಂದನ್ನು ಬಿಟ್ಟರೆ ಬೇರೆ ಕ್ರೀಡೆಗೆ ಯಾವುದೇ ರೀತಿಯಲ್ಲಿ ಮಹತ್ವ ಸಿಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿವಿಧ ಕ್ರೀಡೆಗಳಲ್ಲಿ ದೇಶದ ಹೆಸರನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದವರು ಸಹ ಜೀವನ ನಿರ್ವಹಣೆಗೆ ಪರದಾಡುವಂತ ದುಃಸ್ಥಿತಿಯಲ್ಲಿರುತ್ತಾರೆ. ಉತ್ತರ ಪ್ರದೇಶ ಮೂಲದ ಈ ಕ್ರೀಡಾಪಟು ಸಹ ಒಂದು ಹೊತ್ತಿನ ಊಟಕ್ಕೆ ಹೆಣಗಾಡುತ್ತಿದ್ದಾರೆ. 

ಒಂದು ಕಾಲಕ್ಕೆ ಬಾಕ್ಸಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ, ಯುಪಿಯ 'ಮೇರಿ ಕೊಮ್' ಎಂದು ಹೆಸರುವಾಸಿಯಾಗಿರುವ 'ರುಕ್ಸಾರ್ ಬನ್ನೋ' ಜೀವನ ನಿರ್ವಹಣೆಗೆಂದು ಮತ್ತು ಮುಂದಿನ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬೇಕಾದ ಹಣದ ವ್ಯವಸ್ಥೆ ಮಾಡಿಕೊಳ್ಳಲು ಕಾನ್ಪುರದಲ್ಲಿ ಗಾಳಿಪಟ ತಯಾರಿಸಿ ಮಾರಿ ಹಣ ಸಂಗ್ರಹಿಸುತ್ತಿದ್ದಾರೆ. 
 
ಹಲವಾರು  ಬಂಗಾರದ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅವರ ಆರ್ಥಿಕ ಸ್ಥಿತಿ ಶೋಚನಿಯವಾಗಿದ್ದು, ಸಂಪೂರ್ಣ ಕುಟುಂಬದ ಜವಾಬ್ದಾರಿ ಅವರೊಬ್ಬರ ಹೆಗಲ ಮೇಲಿದೆ. ಅಷ್ಟೇ ಅಲ್ಲದೇ ದಿನವೊಂದಕ್ಕೆ ಅವರು ಸಂಪಾದನೆ ಮಾಡುವ ಹಣ ಕೇವಲ 80ರೂಪಾಯಿ ಎಂಬುದು ವಿಪರ್ಯಾಸ. 
 
ರಾಷ್ಟ್ರ ಮಟ್ಟದ ಸ್ಪರ್ಧಿಗಳೆಲ್ಲ ಮುಂಬರುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಾಗಿ ವಿಶಾಖಪಟ್ಟಣಂನಲ್ಲಿ ಅಭ್ಯಾಸ ನಡೆಸುತ್ತಿದ್ದರೆ, ರುಕ್ಸಾರ್ ಬಳಿ ಸೂಕ್ತ ಶೂ ಮತ್ತು ಟ್ರ್ಯಾಕ್ ಸೂಟ್ ಸಹ ಇಲ್ಲ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ