ಕೇವಲ ದೇವರು ಮಾತ್ರ ಅತ್ಯಾಚಾರಗಳನ್ನು ತಡೆಯಬಲ್ಲ: ಉತ್ತರಪ್ರದೇಶ ರಾಜ್ಯಪಾಲ

ಮಂಗಳವಾರ, 22 ಜುಲೈ 2014 (11:28 IST)
ಇಡೀ ಜಗತ್ತಿನ  ಪೋಲಿಸ್ ಪಡೆಯನ್ನು  ನೇಮಿಸಿದರೂ ಅತ್ಯಾಚಾರವನ್ನು  ತಡೆಯಲು ಸಾಧ್ಯವಿಲ್ಲ, ಅದನ್ನು ನಿಲ್ಲಿಸಲು ದೇವರೇ ಕೆಳಗಿಳಿದು ಬರಬೇಕು ಎಂದು ಉತ್ತರಪ್ರದೇಶದ ರಾಜ್ಯಪಾಲ ಅಜಿಜ್ ಖುರೇಶಿ  ಹೇಳಿದ್ದಾರೆ. 

 
ದೇಶದ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ರಾಜ್ಯಪಾಲ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ  ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ  ಸಂದರ್ಭ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 
 
ಉತ್ತರಪ್ರದೇಶದಲ್ಲಿನ ನಾಯಕರು, ರಾಜಕಾರಣಿಗಳು, ಪೋಲಿಸರು  ರಾಜ್ಯದಲ್ಲಿನ ನಿಲ್ಲದ ಮಹಿಳಾ ದೌರ್ಜನ್ಯದ ಬಗ್ಗೆ ಅಸಂಬದ್ಧ, ವಿವಾದಾಸ್ಪದ, ಹೊಣೆಗೇಡಿತನದ ಹೇಳಿಕೆ ನೀಡುವುದು ಸಾಮಾನ್ಯವಾಗಿ ಬಿಟ್ಟಿದ್ದು,  21 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ  ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇ ಎಂದು  ಆಡಳಿತಾರೂಢ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್  ಕಳೆದವಾರ ಹೇಳಿಕೆ ನೀಡಿದ್ದರು. 
 
 ಲಖನೌನಲ್ಲಿ  ವಿಧವೆಯೊಬ್ಬಳನ್ನು  ಬರ್ಬರವಾಗಿ ಹತ್ಯೆ ಮಾಡಿದ ಸಂದರ್ಭದಲ್ಲಿ ಯಾದವ್ ಈ ಮಾತುಗಳನ್ನಾಡಿದ್ದರು. 
 
ಯುಪಿಯಲ್ಲಿ ಮೇ ತಿಂಗಳಲ್ಲಿ  ಇಬ್ಬರು ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ನೇಣು ಹಾಕಿದ ಘಟನೆಗೆ  ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಪ್ರತಿದಿನ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. 
 
ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಲ್ಲಿ ಪ್ರಶ್ನೆ ಹಾಕಿದ ಮಹಿಳಾ ಪತ್ರಕರ್ತರ ಮೇಲೆ ಉರಿದು ಬಿದ್ದಿದ್ದ ಸಿಎಂ "ನೀವು ಸುರಕ್ಷಿತವಾಗಿದ್ದೀರಲ್ಲ . ಮತ್ಯಾಕೆ  ಈ ಪ್ರಶ್ನೆ ಕೇಳುತ್ತೀರಿ" ಎಂದಿದ್ದರು. 

ವೆಬ್ದುನಿಯಾವನ್ನು ಓದಿ