ಆಪರೇಶನ್ ರಾಮಪಾಲ್‌ಗಾದ ಖರ್ಚು 26 ಕೋಟಿ: ಅವರಿಂದಲೇ ವಸೂಲು ಮಾಡಿದರಾಯಿತು ಎಂದ ಕೋರ್ಟ್

ಶನಿವಾರ, 29 ನವೆಂಬರ್ 2014 (12:00 IST)
ರಾಮಪಾಲ್ ಬಂಧನಕ್ಕೆ ಮತ್ತು ಅವರ ಇಲ್ಲಿಯವರೆಗಿನ ವಿಚಾರಣಾ ಖರ್ಚಿಗೆ ಬರೊಬ್ಬರಿ 26.62 ಕೋಟಿಗಿಂತಲೂ ಅಧಿಕ ಖರ್ಚಾಗಿದೆ ಎಂದು ವರದಿಯಾಗಿದೆ. ಅದರಲ್ಲಿ ಹರಿಯಾಣಾ ಸರ್ಕಾರವೊಂದೇ 15. 43 ಕೋಟಿ ಖರ್ಚು ಮಾಡಿದೆ. ಬಾಕಿ ಖರ್ಚು ಮಾಡಿರುವುದು ಕೇಂದ್ರ,ಆಸ್ಸಾಂ, ಪಂಜಾಬ್ ಮತ್ತು ಚಂದೀಗಢ್ ಸರಕಾರಗಳು. ಸರ್ಕಾರ ಶುಕ್ರವಾರ ಈ ಮಾಹಿತಿಯನ್ನು ಹರಿಯಾಣಾ ಹೈಕೋರ್ಟ್‌ಗೆ ನೀಡಿದೆ. ಈ ಎಲ್ಲ ಖರ್ಚನ್ನು ರಾಮಪಾಲ್ ಬಳಿಯೇ ಯಾಕೆ ವಸೂಲಿ ಮಾಡಬಾರದು ಎಂದು ಕೋರ್ಟ್ ಕೇಳಿದೆ. 

ಕಳೆದ ವಾರ ಬಾಬಾ ಬಂಧನ ಮಾಡಲು ಹೋದಾಗ ಹರಿಯಾಣದ ಹಿಸ್ಸಾರ್ ಜಿಲ್ಲೆಯ ಸತ್ಲೋಕ್ ಆಶ್ರಮದಲ್ಲಿ ಹಿಂದೆಂದೂ ನೋಡದ ವಿರೋಧ ವ್ಯಕ್ತವಾಯಿತು. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪೊಲೀಸರ ಬಂಧನದ ಭೀತಿಯಿಂದ ಆಶ್ರಮದ ಮುಂದೆ ಸಾವಿರಾರು ಜನರನ್ನ ಮುಂದಿಟ್ಟುಕೊಂಡು ಒಳಗೆ ಬಾಬಾ ರಾಂಪಾಲ್ ಅವಿತು ಕುಳಿತಿದ್ದ. ಈ ವೇಳೆ ಪೊಲೀಸರು ಮತ್ತು ಕೆಲವು ಗೂಂಡಾ ಭಕ್ತರ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಒಂದು ಮಗು ಸೇರಿ ಐವರು ಪ್ರಾಣ ಕಳೆದುಕೊಂಡಿದ್ದರು.
 
ಸತತ ಮೂರು ದಿನಗಳ ಕಾರ್ಯಾಚರಣೆ ಬಳಿಕ ಪೊಲೀಸರು ವಂಚಕ ಬಾಬಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಾಬಾನ ಬಂಧನಕ್ಕೆ ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ರೂಪಾಯಿಗಳನ್ನು ಸುರಿಯಲಾಗಿದೆ.
 
ರಾಂಪಾಲ್‌ ಬಂಧನಕ್ಕೆ ಹರಿಯಾಣ ಸರ್ಕಾರ 15.43 ಕೋಟಿ ರೂಪಾಯಿ, ಪಂಜಾಬ್‌ 4.34 ಕೋಟಿ ರೂಪಾಯಿ, ಚಂಡೀಗಡ  ರೂ.  3.29 ಕೋಟಿ ಮತ್ತು ಕೇಂದ್ರ ಸರ್ಕಾರ 3.55 ಕೋಟಿ ರೂ. ಖರ್ಚು ಮಾಡಿದೆ ಎಂದು ಮಾಹಿತಿ ಲಭಿಸಿದೆ.

ವೆಬ್ದುನಿಯಾವನ್ನು ಓದಿ