ಪಾಕ್, ಬಾಂಗ್ಲಾ ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ

ಶುಕ್ರವಾರ, 30 ಜನವರಿ 2015 (09:29 IST)
ಪಾಕಿಸ್ತಾನದಲ್ಲಿನ ದಬ್ಬಾಳಿಕೆಯನ್ನು ತಾಳಲಾರದೆ ಭಾರತಕ್ಕೆ ಓಡಿ ಬಂದು ನೆಲೆಸಿರುವ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 
 
7 ವರ್ಷಕ್ಕಿಂತ ಹೆಚ್ಚು ಕಾಲದಿಂದ ಇಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂಗಳಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಲಾಗುವುದು ಎಂದು ವರದಿಯಾಗಿದೆ. ಉತ್ತರ ಪ್ರದೇಶ್, ಗುಜರಾತ್  ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಸಂಬಂಧ ಶಿಬಿರಗಳನ್ನು ಆರಂಭಿಸಲಾಗಿದ್ದು ಅರ್ಜಿ ಸ್ವೀಕರಿಸಿ ಪರಿಶೀಲಿಸಲಾಗುತ್ತಿದೆ. 
 
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಮತ್ತು ಸಿಖ್‌ರ ಮೇಲೆ ಅವ್ಯಾಹತವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬರುವುದು ಕೂಡ ಸಾಮಾನ್ಯ ಸಂಗತಿಯಾಗಿದೆ. ಈ ನಿರಾಶ್ರಿತರಲ್ಲಿ ಹೆಚ್ಚಿನವರು ಪ್ರವಾಸಿ ವೀಸಾ ಮತ್ತು ದೀರ್ಘಕಾಲದ ವೀಸಾ ಹೊಂದಿದ್ದಾರೆ. ಬಹುತೇಕರು ವೀಸಾ ಅವಧಿ ವಿಸ್ತರಿಸುವಂತೆ ಅಥವಾ ತಮಗೆ ಭಾರತೀಯ ಪೌರತ್ವ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. 
 
ಬಾಂಗ್ಲಾದೇಶದಿಂದ ಓಡಿ ಬಂದಿರುವ ಹಿಂದೂಗಳಿಗೂ ಸಹ ಸೂಕ್ತ ಮಾನದಂಡಗಳಿದ್ದರೆ ಭಾರತದ ಪೌರತ್ವವನ್ನು ನೀಡಲು ನಿರ್ಧರಿಸಲಾಗಿದೆ. 
 
ದೇಶದಲ್ಲಿ ಸುಮಾರು 20,000ಕ್ಕೂ ಹೆಚ್ಚು ಪಾಕ್ ಮತ್ತು ಬಾಂಗ್ಲಾ ನಿರಾಶ್ರಿತರು ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ