ವಾಜಪೇಯಿಗೆ ಭಾರತರತ್ನ ನೀಡಿದ್ದನ್ನು ಪ್ರಶ್ನಿಸಿದ ಓವೈಸಿ

ಮಂಗಳವಾರ, 5 ಮೇ 2015 (12:15 IST)
ಭಾರತದ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಎಐಎಮ್ಐಎಮ್ ವರಿಷ್ಠ, ಹೈದರಾಬಾದ್‌ನ ಸಂಸದ ಅಸಾವುದ್ದೀನ್  ಓವೈಸಿ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಬಿಜೆಪಿ ವರಿಷ್ಠ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿರುವುದನ್ನು ಕೂಡ ಅವರು ಪ್ರಶ್ನಿಸಿದ್ದಾರೆ. 
 
"ಬಿಜೆಪಿಯ ವರಿಷ್ಠ ನಾಯಕ ವಾಜಪೇಯಿಯವರು ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಕುರಿತ ವಿಡಿಯೋಗಳು ಯುಟ್ಯೂಬ್‌ನಲ್ಲಿ ಲಭ್ಯವಿವೆ. ಹಾಗಿರುವಾಗ ಅವರಿಗೆ ಭಾರತರತ್ನವನ್ನು ನೀಡಿರುವುದು ಸಮಂಜಸವಲ್ಲ", ಎಂದು ಸಂಸದ ಹೇಳಿದ್ದಾರೆ. 
 
ಲಖನೌನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಓವೈಸಿ, "ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ಸರಕಾರ  ಪದ್ಮವಿಭೂಷಣವನ್ನಿತ್ತು ಗೌರವಿಸಿರುವುದು ಎಷ್ಟರ ಮಟ್ಟಿಗೆ ಸರಿ", ಎಂದು ಪ್ರಶ್ನಿಸಿದ್ದಾರೆ.
 
"ರಥಯಾತ್ರೆಯ ಹೆಸರಿನಲ್ಲಿ ದೇಶದಲ್ಲಿ ಕೋಮುವಾದವನ್ನು ಬೆಳೆಸಲು ಪ್ರಯತ್ನಿಸಿದ ಅಡ್ವಾಣಿಯವರು ಈ ಪ್ರಶಸ್ತಿಗೆ ಅರ್ಹರಲ್ಲ. ದೇಶದ ಇತಿಹಾಸದಲ್ಲಿ ಕ್ರಿಮಿನಲ್ ಆರೋಪ ಹೊಂದಿರುವವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲಿರಬೇಕು", ಎಂದು ಓವೈಸಿ ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ