ಕಾಶ್ಮಿರ ಪಂಡಿತ್ ಎನ್ನುವ ಕಾರಣಕ್ಕಾಗಿ ಪಾಕಿಸ್ತಾನದಿಂದ ವೀಸಾ ನಿರಾಕರಣೆ: ಅನುಪಮ್ ಖೇರ್

ಮಂಗಳವಾರ, 2 ಫೆಬ್ರವರಿ 2016 (16:03 IST)
ಕರಾಚಿಯಲ್ಲಿ ಫೆಬ್ರವರಿ 5 ರಿಂದ ನಡೆಯಲಿರುವ ಕರಾಚಿ ಲಿಟ್ರೆರಿ ಫೆಸ್ಟಿವಲ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ಅನುಪಮ್ ಖೇರ್‌ಗೆ ಪಾಕಿಸ್ತಾನ ರಾಯಭಾರಿ ಕಚೇರಿ ವೀಸಾ ನೀಡಲು ನಿರಾಕರಿಸಿದೆ. 
 
ಕರಾಚಿ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು 18 ಜನರ ನಿಯೋಗ ಪಾಕಿಸ್ತಾನದ ರಾಯಭಾರಿ ಕಚೇರಿಗೆ ವೀಸಾಗಾಗಿ ಅರ್ಜಿ ಸಲ್ಲಿಸಿತ್ತು. ಅದರಲ್ಲಿ 17 ಜನರಿಗೆ ವೀಸಾ ನೀಡಲಾಗಿದೆ. ನನಗೆ ಮಾತ್ರ ವೀಸಾ ನಿರಾಕರಿಸಿದ್ದರಿಂದ ತುಂಬಾ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ, ಭಾರತದಲ್ಲಿ ಅಸಹಿಷ್ಣುತೆ ಕುರಿತಂತೆ ಚರ್ಚೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಥವಾ ಕಾಶ್ಮಿರಿ ಪಂಡಿತ ಎನ್ನುವ ಕಾರಣಕ್ಕಾಗಿ ವೀಸಾ ನಿರಾಕರಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
 
ಏತನ್ಮಧ್ಯೆ, ಬಾಲಿವುಡ್ ಅನುಪಮ್ ಖೇರ್ ಪಾಕಿಸ್ತಾನದ ವೀಸಾಗಾಗಿ ಅರ್ಜಿಯೇ ಸಲ್ಲಿಸಿಲ್ಲ ಎಂದು ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
ಅನುಪಮ್ ಖೇರ್ ಕುರಿತಂತೆ ಪ್ರಕಟವಾಗುತ್ತಿರುವ ವರದಿಗಳು ನಿರಾಧಾರವಾಗಿವೆ. ಅವರು, ಯಾವತ್ತೂ ಪಾಕ್ ವೀಸಾ ಪಡೆಯಲು ಅರ್ಜಿ ಸಲ್ಲಿಸಿಲ್ಲ ಎಂದು ಪಾಕಿಸ್ತಾನ ರಾಯಭಾರಿ ಕಚೇರಿಯ ವಕ್ತಾರ ಮಂಜೂರ್ ಅಲಿ ಮೆಮನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ